ನೀತಿಬೋಧೆಗೆ ‘ವೇದಿಕೆ’ಯೆ ಸನ್ಮಾನ?

ಮಂಗಳೂರು ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರಾಗಿ ವಂ| ಪೀಟರ್ ಪಾವ್ಲ್ ಸಲ್ಡಾನ್ಹಾ ಅಧಿಕಾರ ವಹಿಸಿಕೊಂಡ ಕೂಡಲೇ ‘ಬಂಧುತ್ವ’ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಾಮಾಜಿಕ ಸಾಮರಸ್ಯ ಮತ್ತು ಧಾರ್ಮಿಕ ಸೌಹಾರ್ದತೆ ಬೆಳೆಸುವ ಉದ್ದೇಶದಿಂದ ರೂಪಿಸಿದ ಈ ಕಾರ್ಯಕ್ರಮಕ್ಕೆ ಸರ್ವಧರ್ಮಗಳ ನಾಯಕರನ್ನು ಆಹ್ವಾನಿಸಲಾಗಿತ್ತು. ಬಹುತೇಕ ಮುಂಚೂಣಿ ನಾಯಕರು ಆಗ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಬಂಧುತ್ವ  – ಅಂದು 

ಬಂಧುತ್ವ  – ಇಂದು

ಇದು ಸುಮಾರು ನಾಲ್ಕು ವರ್ಷಗಳ ಹಿಂದಿನ ಕತೆ. ಇಂದಿಗೂಬಂಧುತ್ವ’ ಕಾರ್ಯಕ್ರಮವನ್ನು ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಅವರ ‘ಸಿಗ್ನೇಚರ್ ಕಾರ್ಯಕ್ರಮ’ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ಆದರೆ . . . ಪ್ರಸ್ತುತ ನಡೆಯುತ್ತಿರುವ ‘ಬಂಧುತ್ವ’ ಕಾರ್ಯಕ್ರಮಗಳಲ್ಲಿ ಇತರ ನಂಬಿಕೆಗಳ ಮುಂಚೂಣಿ ನಾಯಕರ ಗೈರುಹಾಜರಿ ಎದ್ದು ಕಾಣುತ್ತಿದೆ. ಕಾರಣ ಏನಿರಬಹುದು? ಇತ್ತೀಚೆಗೆ ಮಂಗಳೂರಿನ ಫಾ| ಮುಲ್ಲರ್ ಸಭಾಭವನದಲ್ಲಿ ನಡೆದ ಸಮಾಜ ಬಾಂಧವರೊಬ್ಬರ ‘ನಾಗರಿಕ ಸನ್ಮಾನ’ ಕಾರ್ಯಕ್ರಮದ ವಿಡಿಯೊ ವೀಕ್ಷಿಸುವಾಗ ಸುಳಿವು ದೊರೆಯಿತು.

ನಗರದ ಪ್ರಥಮ ಪ್ರಜೆಯಾದ ಮಹಾಪೌರರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸದಿದ್ದರೂ, ನಾಗರಿಕ ಸನ್ಮಾನ’ ಎಂದು ಬಿಂಬಿಸಲಾಗಿದ್ದ, ಸದ್ರಿ ಸನ್ಮಾನ ಸಮಾರಂಭಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಬರಬೇಕಿತ್ತು. ಮೂಡಬಿದ್ರೆಯ ಮೋಹನ್ ಆಳ್ವ, ನಿಟ್ಟೆಯ ವಿನಯ ಹೆಗ್ಡೆ, ಬಂಟರ ಸಂಘದ ಮಾಲಾಡಿ ಅಜಿತ್ ಕುಮಾರ್ ರೈ – ಇವರ ಹೆಸರುಗಳೂ ಆಹ್ವಾನ ಪತ್ರಿಕೆಯಲ್ಲಿದ್ದವು. ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರು, ಯು. ಟಿ. ಖಾದರ್ ವಿರೋಧ ಪಕ್ಷ ನಾಯಕರು – ದೆಹಲಿ, ಬೆಂಗಳೂರಿನಲ್ಲಿ ಇದ್ದರು ಅಂದರೆ  ಒಪ್ಪಿಕೊಳ್ಳೋಣ. ಆದರೆ ಮೂಡಬಿದ್ರೆ, ನಿಟ್ಟೆ ಮತ್ತು ಮಂಗಳೂರಿನಲ್ಲಿರುವ ಮುಂಚೂಣಿಯ ನಾಯಕರೂ, ಆಹ್ವಾನಪತ್ರಿಕೆಯಲ್ಲಿ ಹೆಸರಿದ್ದೂ ಗೈರುಹಾಜರಾಗಿದ್ದರು ಅಂದರೆ – ಬಂಧುತ್ವ, ಸಾಮರಸ್ಯ, ನಾಗರಿಕ ಸನ್ಮಾನ ಮುಂತಾದ ತಂತ್ರಗಳು ನಿಷ್ಪ್ರಯೋಜಕವಾಗುತ್ತಿವೆ ಎಂದು ಅರ್ಥವಲ್ಲವೆ?

ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೌಹಾರ್ದ ಕ್ರಿಸ್‌ಮಸ್, ಬಂಧುತ್ವ ಕ್ರಿಸ್‌ಮಸ್ ಎಂದು ರೋಮನ್ ಕಥೊಲಿಕ್ ಸಮುದಾಯದ ಮುಖಂಡರು ಖಾಸಗಿಯಾಗಿ ಚರ್ಚ್ ಆವರಣದೊಳಗೆ ಆಚರಿಸಬೇಕಾದ ಹಬ್ಬವನ್ನು ಬೀದಿಗೆ ತಂದಿದ್ದಾರೆ. ರಸ್ತೆಬದಿ ಪೆಂಡಾಲ್ ಹಾಕಿ ‘ಸೌಹಾರ್ದ ಕ್ರಿಸ್‌ಮಸ್’ ಎಂದು ಆಚರಿಸುವುದು ರೂಡಿಯಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಒಬ್ಬ ಮುಸ್ಲಿಂ ಧರ್ಮಗುರು, ಒಬ್ಬ ಕ್ರೈಸ್ತ ಪಾದ್ರಿ ಇರುತ್ತಾರೆ. ಹಿಂದೂ ಧರ್ಮದ ಮುಂಚೂಣಿಯ ನಾಯಕರು ಇಂತಹ ಕಾರ್ಯಕ್ರಮಗಳಿಗೆ ಈಗ  ಅತಿಥಿಗಳಾಗಿ ಬರುವುದು ಕಾಣುತ್ತಿಲ್ಲ. ಆದುದರಿಂದ ಸದ್ಯ ರಾಮಕೃಷ್ಣ ಮಠದ ಸ್ವಾಮಿಗಳು ಅಥವಾ ಬ್ರಹ್ಮಕುಮಾರಿಯೊಬ್ಬರು ಅವರ ಜಾಗದಲ್ಲಿ ವೇದಿಕೆಯಲ್ಲಿರುತ್ತಾರೆ.

ನನಗಂತೂ ಪ್ರಶ್ನೆ ಕಾಡುತ್ತಿದೆ – ಈ ಸೌಹಾರ್ದ, ಸಾಮರಸ್ಯ ಎಲ್ಲವೂ ಬರೀ ‘ಬೀದಿನಾಟಕ’ಗಳು. ಸಾವಿರಗಟ್ಟಲೆ ಸಮಾಜ ಬಾಂಧವರನ್ನು ಒಟ್ಟುಗೂಡಿಸಿ, ಅತಿಥಿಯಾಗಿ ಬಂದ ಬಹುಸಂಖ್ಯಾತ ಧರ್ಮದ ಗುರು ಅಥವಾ ನಾಯಕರಿಗೆ  ಪಾಠ ಹೇಳಲೆಂದೇ – ಉದ್ದೇಶಪೂರ್ವಕ ಹೆಣೆದ ತಂತ್ರಗಳೋ ?

ಇತ್ತೀಚೆಗೆ ನಡೆದ ‘ನಾಗರಿಕ ಸನ್ಮಾನ’ ದ ಕಾರ್ಯಕ್ರಮವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ವೇದಿಕೆಯಲ್ಲಿ ಉಪಸ್ಥಿತರಿದ್ದವರು ರಾಮಕೃಷ್ಣ ಮಠದ ಸ್ವಾಮಿಜೀಯವರು. ವಿದ್ವತ್ತು ಮತ್ತು ಸರಳತೆಯ ವಿಚಾರದಲ್ಲಿ ಮಂಗಳೂರಿನಲ್ಲಿ ಜೀತಕಾಮಾನಂದ ಸ್ವಾಮಿಜೀಯವರಿಗೆ ಬಹಳ ದೊಡ್ಡ ಹೆಸರು ಮತ್ತು ಅಪಾರ ಗೌರವವಿದೆ. ಸನ್ಮಾನಿತರು ಸರಕಾರದ ಇಲಾಖೆಗಳಿಗೆ ಕಟ್ಟಡಗಳನ್ನು ನಿರ್ಮಿಸಿ ಕೊಡುವುದರ ಮೂಲಕ ಹೇಗೆ ಸರಕಾರದ ಕೆಲಸವನ್ನು ಮಾಡುತ್ತಾರೋ, ರಾಮಕೃಷ್ಣ ಮಠದವರೂ ಸರಕಾರದ ‘ಸ್ವಚ್ಛ ಭಾರತ್’ ಮಿಷನ್ ಕಾರ್ಯಕ್ರಮದ ಜತೆ ಬಹಳ ದೊಡ್ಡ ಮಟ್ಟದಲ್ಲಿ ಕೈಜೋಡಿಸಿದ್ದಾರೆ. ಕೂಲಂಕಷವಾಗಿ ನೋಡಿದರೆ, ಒಂದು ಕಟ್ಟಡ ಕಟ್ಟಿ ಕೊಡುವುದು ಬಹಳ ಸುಲಭದ ಕೆಲಸ, ಒಂದಿಷ್ಟು ದುಡ್ಡಿದ್ದರೆ ಸಾಕು. ಆದರೆ ರಸ್ತೆಗಳಲ್ಲಿ ಬಿದ್ದ ಕಸ ಹೆಕ್ಕುವುದು, ಸಾರ್ವಜನಿಕ ಸ್ಥಳಗಳನ್ನು ಖುದ್ದಾಗಿ ಸ್ವಚ್ಛ ಮಾಡುವುದು ಸಣ್ಣ ಕೆಲಸವೇನೂ ಅಲ್ಲ. ಇಂತಹ ಪ್ರಾಮಾಣಿಕ ಕಾಯಕದಲ್ಲಿ ತೊಡಗಿರುವ ಸಂತನ ಕೈಯಿಂದ ನಾಗರಿಕ ಸನ್ಮಾನ ಸ್ವೀಕರಿಸಿದ ನಂತರ ಸನ್ಮಾನಿತರು ಅವರ ಬಗ್ಗೆ ಲಘುದಾಟಿಯಲ್ಲಿ ಆಡಿದ ಮಾತುಗಳು, ಸಾಮರಸ್ಯದ ಪ್ರಶಸ್ತಿ ಸ್ಥಾಪಿಸಿದ ಸಮಾರಂಭವೊಂದಕ್ಕೆ ಶೋಭೆಯಲ್ಲ ಎಂಬುದು ನನ್ನ ಅನಿಸಿಕೆ.

“ರಾಮಕೃಷ್ಣ ಮಿಷನ್ ಸ್ವಾಮೀಜಿ ಬಗ್ಗೆನೂ ಕೇಳಿದ್ದೇನೆ. ಅವರೆಲ್ಲ ಪರಿಸರ ತಿಳಿ/ ಸ್ವಚ್ಛ ಮಾಡುವುದಕ್ಕೆ ಹೊರಟಿದ್ದಾರೆ. ಪರಿಸರದ ಜೊತೆಯಲ್ಲಿ ಹೃದಯ, ಮನಸ್ಸಿನ ಸ್ವಚ್ಚತೆನೂ ಆಗಬೇಕಾಗಿದೆ. ಅದನ್ನೂ ಕೂಡ ಅವರು ಖಂಡಿತ  ಕೈಗೆತ್ತಿಕೊಳ್ಳುತ್ತಾರೆ ಎಂಬುದು ನನ್ನ ಭಾವನೆ”  ಸನ್ಮಾನಿತರು ಹೀಗೆ ಹೇಳುತ್ತಿರಬೇಕಾದರೆ ಸಭೆಯಲ್ಲಿ ಹಾಜರಿದ್ದರವರೆಲ್ಲರೂ ಕರತಾಡನ ಮಾಡಿದರು.(ವಿಡಿಯೊ ಗಮನಿಸಿ)  ಯಾಕಿರಬಹುದು? ಇದು ನನ್ನ ಊಹೆಗೆ ನಿಲುಕದ ವಿಚಾರ!

ವೇದಿಕೆಯಲ್ಲಿ ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾದೋ ಸೇರಿದಂತೆ, ಮಂಗಳೂರು, ಉಡುಪಿ, ಶಿವಮೊಗ್ಗ, ಬಳ್ಳಾರಿ, ಬೆಳ್ತಂಗಡಿ ಧರ್ಮಪ್ರಾಂತ್ಯಗಳ ಧರ್ಮಾಧ್ಯಕ್ಷರುಗಳು ಹಾಜರಿದ್ದರು. ಆದರೆ ಅವರನ್ನು ಉದ್ದೇಶಿಸಿ ಸನ್ಮಾನಿತರು ಈ ಮಾತನ್ನು ಹೇಳಲಿಲ್ಲ. ರಾಮಕೃಷ್ಣ ಮಠದ ಸ್ವಾಮಿಗಳನ್ನು ಮಾತ್ರ ಉದ್ದೇಶಿಸಿ ಹೃದಯ, ಮನಸ್ಸಿನ ಸ್ವಚ್ಛತೆಯಾಗಬೇಕೆಂದು ಹೇಳಿರುವ ಉದ್ದೇಶವಾದರೂ ಏನಿರಬಹುದು?

‘ಸ್ವಚ್ಛ ಮಂಗಳೂರು – ಸ್ವಚ್ಚ ಮನಸ್ಸು’  ರಾಮಕೃಷ್ಣ ಮಿಷನ್ ಸಾಧನೆ.  

ಹಾಗೆ ನೋಡಿದರೆ ಮಂಗಳೂರು ಧರ್ಮಾಧ್ಯಕ್ಷರು ‘ಬಂಧುತ್ವ’ದ ಜೊತೆಗೆ ಗಿಡ ನೆಡುವ ಲಾವ್ದತೊ ಸಿ ಕಾರ್ಯಕ್ರಮವನ್ನೂ, ನೀರು ಹಿಂಗಿಸುವ ಜಲಬಂಧನ್ ಎಂಬ ಕಾರ್ಯಕ್ರಮವನ್ನೂ ಹಮ್ಮಿಕೊಂಡು ಪರಿಸರ ತಿಳಿಗೊಳಿಸುವ ಬಹು ದೊಡ್ಡ ಕೆಲಸ ಮಾಡುತ್ತಿಲ್ಲವೇ ? ಸನ್ಮಾನಿತರಿಗೆ ಅವರು ಕಾಣಲಿಲ್ಲವೆ ?  ರಾಮಕೃಷ್ಣ ಮಠದವರು ಮಾತ್ರ ಯಾಕೆ ಪರಿಸರದ ಜೊತೆಯಲ್ಲಿ ಹೃದಯ, ಮನಸ್ಸು ತಿಳಿಗೊಳಿಸುವ ಕೆಲಸ ಕೈಗೆತ್ತಿಕೊಳ್ಳಬೇಕು? ಕ್ರೈಸ್ತ ಧರ್ಮಕ್ಷೇತ್ರಗಳ ಧರ್ಮಾಧ್ಯಕ್ಷರುಗಳು ಏಕೆ ಅದನ್ನು ಮಾಡಬಾರದು? ಅದರಲ್ಲೂ ಪ್ರತ್ಯೇಕವಾಗಿ, ಪ್ರಪಂಚದಾದ್ಯಂತ ಕ್ರೈಸ್ತರು ಪ್ರಾಯಶ್ಚಿತದ ಕಪ್ಪು ದಿನ ಗಳನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ?!?

ಇಷ್ಟಕ್ಕೂ ರಾಮಕೃಷ್ಣ ಮಠದ ಸ್ವಾಮಿಜೀಯವರಾಗಲೀ, ಬ್ರಹ್ಮಕುಮಾರಿಯವರಾಗಲೀ ಸನ್ಮಾನ ಸಮಾರಂಭಕ್ಕೆ ಯಾವುದೇ ಧರ್ಮದ ವಕ್ತಾರರಾಗಿ ಬಂದಂತೆ ಇಲ್ಲ. ಲಕ್ಷೋಪಲಕ್ಷ ಸಂಖ್ಯೆಯಲ್ಲಿರುವ ಅವರ ಧರ್ಮದ ಅನುಯಾಯಿಗಳಲ್ಲಿ ಯಾವನೋ ಒಬ್ಬನ ಹೃದಯ ಅಥವಾ ಮನಸ್ಸಿನಲ್ಲಿ ಕಲ್ಮಷವಿದ್ದರೆ ಅದಕ್ಕೆ ಸ್ವಾಮೀಜಿಯವರನ್ನಾಗಲೀ, ಬ್ರಹ್ಮಕುಮಾರಿಯವರನ್ನ ಹೊಣೆಗಾರರನ್ನಾಗಿ ಮಾಡುವುದು ಎಷ್ಟು ಸರಿ ? ಹಾಗಾದರೆ ಕ್ರೈಸ್ತರ ಹೃದಯಗಳಲ್ಲಿರುವ ಕಲ್ಮಷಕ್ಕೆ ವೇದಿಕೆಯಲಿದ್ದ ಅಷ್ಟೂ ಧರ್ಮಾಧ್ಯಕ್ಷರುಗಳು, ಮುಸ್ಲಿಮರ ಹೃದಯದಲ್ಲಿರುವ ಕಲ್ಮಷಕ್ಕೆ ವೇದಿಕೆಯಲ್ಲಿದ್ದ ಮುಸ್ಲಿಮ್ ಹಿರಿಯರೆಲ್ಲ ಜವಾಬ್ದಾರರೆ ? ಸನ್ಮಾನಿತರು ಒಂದು ಮಠದ ಹಿರಿಯರ ಬಗ್ಗೆ ಲಘುವಾಗಿ ಮಾತನಾಡುವಾಗ ಇತರ ಧರ್ಮಾಧ್ಯಕ್ಷರು ಯಾಕೆ ಸುಮ್ಮನಿದ್ದರು? ಇಂತಹ ಹೇಳಿಕೆಗಳನ್ನು ಅವರು ಪುರಸ್ಕರಿಸುತ್ತಾರೆಯೆ ?

ಬಂಧುತ್ವ, ಸೌಹಾರ್ದ, ನಾಗರಿಕ ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನು ಅಯೋಜಿಸುವವರು, ಪ್ರತ್ಯೇಕವಾಗಿ ಇತರ ನಂಬಿಕೆಯ ಅತಿಥಿಗಳು ವೇದಿಕೆಯಲ್ಲಿ ಇರುವಾಗ ಮಾತಿನ ಮೇಲೆ ವಿಶೇಷ ನಿಗಾ ಇಡಬೇಕಾದ ಆವಶ್ಯಕತೆ ಹಿಂದೆಂದಿಗಿಂತಲೂ ಇಂದು ಅಧಿಕವಾಗಿದೆ. ಸಸ್ಯಾಹಾರ ಕೊಟ್ಟು, ಆಚಾರದಲ್ಲಿ  ಶುಚಿತ್ವ ನಿಭಾಯಿಸದಿದ್ದರೆ ಪ್ರಯೋಜನವಿಲ್ಲ.

ಬಹುತೇಕ ಇಂತಹ ಕಾರ್ಯಕ್ರಮಗಳಿಗೆ ಖಾಸಗಿ ಒಡನಾಟ, ಪ್ರೀತಿಯಿಂದ ಇತರ ಧರ್ಮಗಳ ಹಿರಿಯರು, ಮುಖಂಡರು ಅತಿಥಿಗಳಾಗಿ ಬರಲು  ಒಪ್ಪಿಕೊಳ್ಳುತ್ತಾರೆ. ಅವರಲ್ಲಿ ಯಾರೂ ಧರ್ಮದ ಪ್ರತಿನಿಧಿಗಳಾಗಿ ಬರುವುದಿಲ್ಲ. ಹಾಗೆಂದು ಅವರನ್ನು ಪರಿಗಣಿಸಲೂ ಬಾರದು. ವೇದಿಕೆಯಲ್ಲಿ ಅವರನ್ನು ಕೂರಿಸಿ ’ಹೀಗೆ ಮಾಡಬಾರದು, ಹೀಗೆ ಮಾಡಬೇಕು’ ಎಂದು ಲಘುವಾಗಿ ಮಾತನಾಡಿ ಚಪ್ಪಾಳೆ ಗಿಟ್ಟಿಸುವುದಂತೂ ಸಜ್ಜನಿಕೆಯ ಲಕ್ಷಣ ಅಲ್ಲ.

ಇತರ ನಂಬಿಕೆಗಳ ಮುಂಚೂಣಿಯ ನಾಯಕರು ಈಗಾಗಲೇ ಇಂತಹ ಸೌಹಾರ್ದ, ನಾಗರಿಕ, ಬಂಧುತ್ವ ಕಾರ್ಯಕ್ರಮಗಳಿಗೆ ಬರುವುದನ್ನೇ ನಿಲ್ಲಿಸಿದ್ದಾರೆ. ಕಾರ್ಯಕ್ರಮಕ್ಕೆ ಬಂದವರನ್ನು ಉದ್ದೇಶಿಸಿ ಈ ರೀತಿ ಲಘುವಾಗಿ ಮಾತನಾಡುವುದು ಮುಂದುವರೆದರೆ, ಭವಿಷ್ಯದಲ್ಲಿ ಬ್ರಹ್ಮಕುಮಾರಿ ಕೇಂದ್ರದಿಂದಾಗಲೀ, ರಾಮಕೃಷ್ಣ ಮಠದಿಂದಾಗಲೀ ಇಂತಹ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಬರುವ ಸಾಧ್ಯತೆಗಳೂ ಕ್ಷೀಣವಾಗುತ್ತವೆ ಎಂಬುದನ್ನು ಸಕಾಲದಲ್ಲಿ ಅರಿತುಕೊಳ್ಳುವುದು ಒಳಿತು.

ಸನ್ಮಾನ ಸಮಾರಂಭಗಳು, ಪ್ರೀತ್ಯಾದರಗಳಿಂದ ನೀಡಿದ ಗೌರವ ಧನ್ಯತಾ ಭಾವದಿಂದ ಸ್ವೀಕರಿಸಿ, ಕೃತಜ್ಞತೆ ಸಲ್ಲಿಸುವುದಕ್ಕೆ ಸೀಮಿತವಾಗಿರಬೇಕು ಮತ್ತು  ಸನ್ಮಾನಿತರ ಬಗ್ಗೆ ಇರುವ  ಗೌರವ ಹೆಚ್ಚಿಸುವಂತಾಗಬೇಕು ಹೊರತು, ಸನ್ಮಾನ ಮಾಡಿದ ಪೂಜ್ಯರನ್ನೂ ಬಿಡದೇ, ದೂರದ ಊರುಗಳಿಂದ ಬಂದ ಸಭಿಕರಿಗೆ ‘ನೀತಿಭೋಧೆ’ ಮಾಡಲು ಸನ್ಮಾನದ ವೇದಿಕೆಗಳು ದುರ್ಬಳಕೆಯಾಗಬಾರದು –  ಇದನ್ನು ಅರ್ಥೈಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿ, ಆತ್ಮಾವಲೋಕನವಾಗಲಿ – ಎಂಬುದೇ ಈ ಬರಹದ ಪ್ರಾಮಾಣಿಕ ಉದ್ದೇಶ!

► ಎಚ್ಚೆಮ್ ಪೆರ್ನಾಲ್

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

3 comments

Avatar
George Dsouza February 26, 2023 - 12:48 pm

This is like “I want my 20 seconds of fame at the expense of the guest whom I have invited at the first place”
Very poor and tasteless gesture by Ronald Colaco.

Reply
Avatar
Melwyn February 26, 2023 - 9:29 pm

Very genuine analysis and concern; it must reach the organizers and future leaders!

Reply
ಫಿಲಿಪ್ ಮುದಾರ್ಥ್
ಫಿಲಿಪ್ ಮುದಾರ್ಥ್ March 4, 2023 - 6:25 pm

ಸನ್ಮಾನಿತ ಘಣ್ಯಾ ವ್ಯಕ್ತಿಯವರು ಮೊದಲು ತನ್ನ ಮನಸ್ಸಿನ ಸ್ವಚ್ಚತೆ ಮಾಡಬೇಕು. ನೀತಿ ಭೊದಿಕೆ ಮಾಡುವುದು ಅವರ ಹವ್ಯಾಸ. ಅದು ಖಂಡನೀಯ. ಅಂತಹ ನೀತಿ ಭೋದಿಕೆ ಸನ್ಮಾನಿತರು ಖಾಸಗಿ ಮಟ್ಟದಲ್ಲಿ ಅವರ ಮಿತ್ರರಾದ ಬಾಜಪ ಮುಖಂಡರಿಗೆ ನೀಡಬೇಕು ಅಲ್ಲದೆ ಈ ಮಂಚದಲ್ಲಿ ಅಲ್ಲ. ಇದು ಕ್ರೈಸ್ಥಾ ಸಮೂದಾಯಾದ ನಾಯಕರ ಅಧಿಕ್ರತ ಮಂಚ ಅಲ್ಲವಾ?

Reply

Leave a Comment

© All Right Reserved. Kittall Publications. 

-
00:00
00:00
Update Required Flash plugin
-
00:00
00:00