‘ಲೇಖಕರು ಸದಾ ಸಂವೇದನಾಶೀಲರಾಗಿರಬೇಕು’ – ದತ್ತಾ ದಾಮೋದರ ನಾಯಕ್

ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಪುಸ್ತಕ ಕಾರ್ಯಕ್ರಮ

“ಲೇಖಕರು ವೈಜ್ಞಾನಿಕ ಮನೋಭಾವ, ತಾರ್ಕಿಕತೆ ಮತ್ತು ಸಂವೇದನಾಶೀಲತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಸಾಹಿತ್ಯ ಕೃತಿ ರಚನೆ ಸಾಧ್ಯ. 25 ಮಿಲಿ ಸುಗಂದ ದೃವ್ಯ ತಯಾರಿಸಲು ಸಾವಿರಾರು ಹೂವಿನ ಪಕಳೆಗಳನ್ನು ಅರೆಯಬೇಕಾಗುತ್ತದೆ. ಒಂದು ಸಾಹಿತ್ಯ ಕೃತಿಯ ರಚನೆಯ ಹಿಂದೆ ಸಾವಿರಾರು ಪುಟಗಳ ಓದು, ಅಭ್ಯಾಸ ಇರುತ್ತದೆ.” ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಗೋವಾದ ಹಿರಿಯ ಕೊಂಕಣಿ ಸಾಹಿತಿ ಶ್ರೀ ದತ್ತಾ ದಾಮೋದರ ನಾಯಕ್ ಅಭಿಪ್ರಾಯಪಟ್ಟರು.

ಶ್ರೀ ದತ್ತಾ ನಾಯಕ್ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಪುಸ್ತಕ ಪ್ರಕಟಣೆ ಯೋಜನೆಯಡಿ ಪುಸ್ತಕ ಅನುದಾನಕ್ಕೆ  ಆಯ್ಕೆಯಾದ ಲೇಖಕರ ಬಳಗವನ್ನು ಉದ್ದೇಶಿಸಿ ಮಾತನಾಡುತ್ತಿದರು.

ಮುಂದುವರೆದು ಶ್ರೀ ದತ್ತಾ ನಾಯಕ್ ” ಬರವಣಿಗೆಯ ಭಾಷೆ ಸಾಧ್ಯವಾದಷ್ಟು ಸರಳ ಮತ್ತು ಹೃದ್ಯವಾದಾಗ ವಾಚಕನಿಗೆ ಓದುವ ಅನುಭೂತಿ ದಕ್ಕುತ್ತದೆ. ಅತಿಯಾದ ಅಲಂಕಾರ, ಸಾಂಕೇತಿಕತೆ, ಪ್ರತಿಮೆ – ಪ್ರತೀಕಗಳನ್ನು ಹೇರಿಕೊಂದು ರಚಿಸಿದ ಸಾಹಿತ್ಯ ಕೃತಿಯಿಂದ ಓದುಗರು ವಿಮುಖರಾಗುವ ಸಾಧ್ಯತೆಗಳೇ  ಹೆಚ್ಚು. ಓದುಗ ಪುಸ್ತಕ ಓದುವುದು ಅವನ ಸುಖಕ್ಕಾಗಿ ಹೊರತು ನಮಗಾಗಿ ಅಲ್ಲ ಎಂಬುದನ್ನು ಪುಸ್ತಕದ ಲೇಖಕರೂ, ಪ್ರಕಾಶಕರೂ ಅರ್ಥ ಮಾಡಿಕೊಳ್ಳಬೇಕು. ಒಂದು ಉತ್ತಮ ಪುಸ್ತಕ ರೂಪಿಸುವಲ್ಲಿ ಪ್ರಕಾಶಕನ ಕೆಲಸವೂ ಗಣನೀಯ. ಪುಸ್ತಕ ಪ್ರಕಾಶನವೆಂದರೆ ಅದು ಬರೀ ಪ್ಯಾಕೆಜಿಂಗ್ ಕೆಲಸವಲ್ಲ” ಎಂದು ಉಪಸ್ಥಿತರಿದ್ದ ಲೇಖಕ – ಪ್ರಕಾಶಕರಿಗೆ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಳ್ಳುವುದರ ಮೂಲಕ ದತ್ತಾ ನಾಯಕ್ ಸಲಹೆ ನೀಡಿದರು.

ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಬಸ್ತಿ ವಾಮನ್ ಶೆಣೈಯವರ ಪ್ರತಿಮೆಗೆ ಹಾರಾರ್ಪಣೆ ಮತ್ತು ದೀಪ ಪ್ರಜ್ವಲನೆಯ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಪತ್ರಕರ್ತ ಎಚ್ಚೆಮ್ ಪೆರ್ನಾಲ್ ಅಧ್ಯಕ್ಷತೆಯಲ್ಲಿ ಪುಸ್ತಕ ಪಂಚಾತಿಕೆ ಸಂವಾದ ಕಾರ್ಯಕ್ರಮ ನಡೆಯಿತು. ಹಿರಿಯ ಲೇಖಕರಾದ ಶ್ರೀಮತಿ ಶಕುಂತಲಾ ಆರ್. ಕಿಣಿ, ಶ್ರೀ ಎಡ್ಡಿ ಸಿಕ್ವೇರಾ ಲೇಖಕರ ಪರವಾಗಿ, ಶ್ರೀ ಪಯ್ಯನ್ನೂರು ರಮೇಶ ಪೈ ಮತ್ತು ಸಂತ ಅಲೋಶಿಯಸ್ ಪ್ರಕಾಶನದ ನಿರ್ದೇಶಕಿ ಡೊ| ವಿದ್ಯಾ ವಿನುತ ಡಿಸೊಜ ಪ್ರಕಾಶಕರ ಪರವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಪುಸ್ತಕ ಪ್ರಕಾಶನ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಲೇಖಕ ಮತ್ತು ಪ್ರಕಾಶಕರ ಜವಾಬ್ದಾರಿ, ಎದುರಾಗುತ್ತಿರುವ ಸಮಸ್ಯೆಗಳು ಮತ್ತು ಲಭ್ಯವಿರುವ ಪರಿಹಾರ ಮಾರ್ಗೋಪಾಯಗಳ ಕುರಿತು ಸಂವಾದದಲ್ಲಿ ಮುಕ್ತ ಚರ್ಚೆ ನಡೆಯಿತು.

ವಿಶ್ವ ಕೊಂಕಣಿ ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಪುಸ್ತಕ ಪ್ರಾಧಿಕಾರದ ಸಂಪಾದಕ ಮಂಡಳಿ ಸದಸ್ಯ ಕವಿ/ ಚಿಂತಕ ಟೈಟಸ್ ನೊರೊನ್ಹಾ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿ, ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಕಾರ್ಯಕ್ರಮದ ಕುರಿತು ವಿಸ್ತಾರ ಮಾಹಿತಿಯನ್ನು ಆಯ್ಕೆಯಾದ ಲೇಖಕರಿಗೆ ನೀಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗ ಮುಖ್ಯಸ್ಥ ಹಾಗೂ ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಸಂಪಾದಕ ಮಂಡಳಿ ಸದಸ್ಯ ಕವಿ ಮೆಲ್ವಿನ್ ರೊಡ್ರಿಗಸ್ ಪುಸ್ತಕ ಅನುದಾನಕ್ಕೆ ಆಯ್ಕೆಯಾದ ಕೃತಿ ಮತ್ತು ಲೇಖಕರ ಹೆಸರುಗಳ ಘೋಷಣೆ ಮಾಡಿದರು. ಗೋವಾ, ಮಹಾರಾಷ್ಟ್ರ, ಕರ್ನಾಟಕ ಮಾತ್ರವಲ್ಲ ದೂರದ ಆಸ್ಟ್ರೇಲಿಯಾದಿಂದಲೂ ಕೊಂಕಣಿ ಸಾಹಿತಿಗಳ 21 ಕೃತಿಗಳು ಅನುದಾನಕ್ಕೆ ಆಯ್ಕೆಯಾಗಿದ್ದು, ಸಾಹಿತಿಗಳು /  ಅವರ ಪ್ರತಿನಿಧಿಗಳು ಹಾಜರಿದ್ದು ಪ್ರಸ್ತಾಪ ಸ್ವೀಕರಿಸಿ ಸಹಿ ಮಾಡಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರೂ, ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಕಾರ್ಯಕ್ರಮದ ನಿರ್ದೇಶಕರೂ ಆಗಿರುವ ಸಿ.ಎ. ನಂದಗೋಪಾಲ ಶೆಣೈ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ” ಕೊಂಕಣಿ ಸಾಹಿತ್ಯಕ್ಕೆ ಉತ್ತೇಜನ ನೀಡುವುದು ಮತ್ತು ಆ ಮೂಲಕ ಕೊಂಕಣಿ ಭಾಷಾ ಸೇವೆ ಮಾಡುವುದು ವಿಶ್ವ ಕೊಂಕಣಿ ಕೇಂದ್ರದ ಮೂಲ ಉದ್ದೇಶಗಳಲ್ಲಿ ಒಂದು. ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಪುಸ್ತಕ ಪ್ರಕಟಣಾ ಕಾರ್ಯಕ್ರಮದ ಮೂಲಕ ಈ ಉದ್ದೇಶವನ್ನು ಈಡೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದು ವಿಶ್ವ ಕೊಂಕಣಿ ಕೇಂದ್ರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದು ಈ ಕಾರ್ಯಕ್ರಮ ನೂರು ಪುಸ್ತಕ ಪ್ರಕಟಣೆಗೆ ಸೀಮಿತಗೊಳಿಸುವುದಿಲ್ಲ, ಮುಂದುವರೆಸಿಕೊಂಡು ಹೋಗುತ್ತೇವೆ ” ಎಂದು ಲೇಖಕ – ಪ್ರಕಾಶಕರಿಗೆ  ಭರವಸೆ ನೀಡಿದರು.

ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಶ್ರೀ ಗಿಲ್ಬರ್ಟ್ ಡಿ ಸೊಜಾ ವಂದಿಸಿದರು. ಶ್ರ‍ೀಮತಿ ಸುಚಿತ್ರಾ ಎಸ್. ಶೆಣೈ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.

ವಿಶ್ವ ಕೊಂಕಣಿ ಕೇಂದ್ರದ ವಿಶ್ವಸ್ಥರಾದ ವಿಲಿಯಮ್ ಡಿ ಸೊಜಾ, ಡಾ| ಕಸ್ತೂರಿ ಮೋಹನ್ ಪೈ, ಖಜಾಂಜಿ ಬಿ. ಆರ್. ಭಟ್ ಮತ್ತು ಕಾರ್ಯ ನಿರ್ವಹಣಾ ಅಧಿಕಾರಿ ಡಾ| ಬಿ. ದೇವದಾಸ ಪೈ ಹಾಜರಿದ್ದರು.

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

Leave a Comment

© All Right Reserved. Kittall Publications. 

-
00:00
00:00
Update Required Flash plugin
-
00:00
00:00