ದುಷ್ಟ ಕೃತ್ಯದ ವಿರುದ್ಧ ಹೋರಾಟದ ಚಿತ್ರ

“ಅವರು ಮಾಡಿದ ದುಷ್ಟ ಕೃತ್ಯದ ವಿರುದ್ಧ ನಾವು ಹೋರಾಡಬೇಕಾಗಿದೆ” ಎಂಬ ಧ್ಯೇಯವಿಟ್ಟು ಗ್ರಾಮೀಣ ಭಾರತದ ಯುವತಿ ಮತ್ತು ಅವಳ ತಂದೆ ಕ್ರೂರ ಅತ್ಯಾಚಾರಕ್ಕೆ ನ್ಯಾಯವನ್ನು ಪಡೆಯಲು, ಬೇರುಬಿಟ್ಟ ಹಳ್ಳಿ ಸಂಸ್ಕೃತಿಯ ವಿರುದ್ಧ ಹೋರಾಡುವ ಕಥೆಯೇ “ಟು ಕಿಲ್ ಎ ಟೈಗರ್”. ಕೆನಡಾ ಪ್ರಜೆಯಾದ ಭಾರತಿಯ ಮೂಲದ ನಿಶಾ ಪಹುಜಾ ನಿರ್ದೇಶಿಸಿದ ಈ ಚಿತ್ರ 2022 ರಲ್ಲಿ ಕೆನಡಾದಲ್ಲಿ ಪ್ರಥಮ ಪ್ರದರ್ಶನಗೊಂಡಿದೆಯಾದರೂ ಎರಡು ವರ್ಷಗಳ ನಂತರ ಭಾರತದ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಗೊಂಡಿದೆ. ಈ ಚಲನಚಿತ್ರ ಭಾನುವಾರ ಮಾರ್ಚ್ 10, 2024 ರಂದು ಆಸ್ಕರ್‌ಗೆ ನಾಮನಿರ್ದೇಶನವಾದ ದಿನದಂದೆ ಭಾರತದ ನೆಟ್‌ಫ್ಲಿಕ್ಸ್ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಯಿತು. ಬಹಳ ಹಿಂದೆಯೇ ಪ್ರೀಮಿಯರ್ ಆಗಬೇಕಾದ್ದರಿಂದ ಭಾರತದಲ್ಲಿ ಇದರ ಬಿಡುಗಡೆಯ ಸಮಯವು ಅನುಮಾನಗಳನ್ನು ಹುಟ್ಟುಹಾಕಿದೆ. ಆಸ್ಕರ್ ನಾಮನಿರ್ದೇಶನಕ್ಕೆ ಎರಡು ದಿನಗಳ ಮೊದಲು ಪ್ರಿಯಾಂಕಾ ಚೋಪ್ರಾ ತನ್ನ ಕಂಪನಿ ಪರ್ಪಲ್ ಪೆಬಲ್ ಪಿಕ್ಚರ್ಸ್ ಮೂಲಕ ಕಾರ್ಯಕಾರಿ ನಿರ್ಮಾಪಕರಾಗಿ ಭರ್ತಿಯಾಗಿ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಸೇರಿದಂತೆ ತನ್ನ ಹೃದಯಕ್ಕೆ ಹತ್ತಿರವಾದ ವಿಷಯಗಳನ್ನು ತಿಳಿಸುವ ಯೋಜನೆಗಳಲ್ಲಿ ಕೆಲಸ ಮಾಡಲು ತಾನು ಸಮರ್ಪಿಸಿಕೊಂಡಿದ್ದೇನೆ ಎಂದು ಹೇಳಿದ್ದು ಇನ್ನೊಂದು ವಿಶೇಷತೆ.

13 ವರ್ಷದ ಹುಡುಗಿ ತನ್ನ ಕೂದಲನ್ನು ಹೆಣೆಯುತ್ತಾ ಇರುವಾಗ, ಮೂವರು ಪುರುಷರಿಂದ ಅತ್ಯಾಚಾರಕ್ಕೊಳದ ಬಗ್ಗೆ ಆಕೆಯ ತಂದೆ ಹೇಳುವ ವಿವರಣೆ ಮೂಲಕ ಚಿತ್ರ ಆರಂಭವಾಗುತ್ತದೆ. ಪೋಸ್ಟ್-ಪ್ರೊಡಕ್ಷನ್ನಲ್ಲಿ ಹುಡುಗಿಯ ಮುಖವನ್ನು ಮರೆಮಾಚಲು ನಿರ್ದೇಶಕಿ ಯೋಜಿಸಿದ್ದರು. ಅದರೆ ಅತ್ಯಾಚಾರಕ್ಕೊಳಗಾದ ಹುಡುಗಿ 18 ನೇ ವಯಸ್ಸಿನಲ್ಲಿ ಈ ಚಿತ್ರದಲ್ಲಿ ತಾನೇ ಸ್ವತಃ ತನ್ನ ಜೀವನದ ಕಥೆಯ ಸಾಕ್ಷಿ ನುಡಿಯುದರ ಮೂಲಕ ತಾನು ಯಾರೆಂದು ಬಹಿರಂಗಪಡಿಸಲು ನಿರ್ಧರಿಸಿ ಅವಮಾನದ ಹೊದಿಕೆಯನ್ನು ನಿರಾಕರಿಸುವುದು ಈ ನಿರ್ಭೀತ ಹುಡುಗಿಯ ಕಡೆಯ ಪ್ರತಿಭಟನೆಯಾಗಿತ್ತು.

ಅತ್ಯಾಚಾರಕ್ಕೊಳಗಾದ ಹುಡುಗಿ ಮತ್ತು ಆಕೆಯ ಕುಟುಂಬ ಈ ಚಿತ್ರದ ಹೀರೊಗಳಾದರೂ ಇದು ಹೀರೋಯಿಸಂನ ಸರಳ ಕಥೆಯಲ್ಲ. ಬದುಕುಳಿದು ನ್ಯಾಯವನ್ನು ಹುಡುಕುವವರಿಗೆ ಲಭ್ಯವಿರುವ ಅನಪೇಕ್ಷಿತ ಮತ್ತು ಅಸಮರ್ಪಕ ಮಾರ್ಗಗಳನ್ನು ಚಲನಚಿತ್ರವು ಬಹಿರಂಗಪಡಿಸುತ್ತದೆ. ಹೋರಾಟದಲ್ಲಿ ಕುಟುಂಬವನ್ನು ಸಾಲಕ್ಕೆ ತಳ್ಳುವ, ತನಗಾದ ಅನ್ಯಾಯ ಹಾಗೂ ಆಘಾತವನ್ನು ಪದೇ-ಪದೇ ಮರುಕಳಿಸುವ ದೀರ್ಘ ಅಗ್ನಿಪರೀಕ್ಷೆ, ಇಡೀ ಸಮುದಾಯದ ವಿರುದ್ಧ ಕುಟುಂಬವನ್ನು ಎತ್ತಿಕಟ್ಟುವ ಹೋರಾಟವು ಯೋಗ್ಯವೇ, ಅಪರಾಧಿಗಳ ಸೆರೆವಾಸ ನಿಜವಾಗಿಯೂ ಸಹಾಯ ನೀಡುತ್ತದೆಯೇ ಆಥವಾ ಪುರುಷ ಪ್ರಾಧನ್ಯ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆಯೇ? ಈ ಪ್ರಶ್ನೆಗಳಿಗೆ “ಟು ಕಿಲ್ ಎ ಟೈಗರ್” ಯಾವುದೇ ಸುಲಭವಾದ ಉತ್ತರಗಳನ್ನು ನೀಡುವುದಿಲ್ಲ. ಆದರೆ ಮಗಳಿಗಾಗಿ ತಲೆಬಾಗಲು ನಿರಾಕರಿಸುವ ತಂದೆ, ಭರವಸೆ ಮತ್ತು ಆತ್ಮವಿಶ್ವಾಸದಿಂದ ಮಾತನಾಡುವ ಹುಡುಗಿ ನಮಗೆ ಹತ್ತಿರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕ್ರಾಂತಿಯು ಮನೆಯಿಂದಲೇ ಪ್ರಾರಂಭವಾಗಬೇಕೆಂಬ ಸಂದೇಶವನ್ನು ಈ ಚಿತ್ರ ನಿಸ್ಸಂಶಯವಾಗಿ ಸಾರುತ್ತದೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಯೊಬ್ಬರು ತಮ್ಮ ಮಗಳ ಪರವಾಗಿ ನಿಂತಿರುವ ಈ ಅಪರೂಪದ ಉದಾಹರಣೆಯನ್ನು ನೋಡಿದ ಸರ್ಗೋ ಫೌಂಡೇಶನ್ ಕಾರ್ಯಕರ್ತರ ಗುಂಪು, ಅಂತಹ ಅಪರಾಧಿಗಳ ಮನಪರಿವರ್ತಿಸಲು ಯಶಸ್ವಿ ಕಾನೂನು ಕ್ರಮವು ಸಹಾಯ ಮಾಡುತ್ತದೆ ಎಂಬ ಭರವಸೆಯೊಂದಿಗೆ ಸಹಾಯ ಮಾಡಲು ತೊಡಗಿದಾಗ, ತಂದೆ ಮತ್ತು ಆತನ ಕುಟುಂಬ ಇತರ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ಕೂಡಲೇ ಪ್ರಕರಣವು “ಗ್ರಾಮದ ಒಳಗಿನ ವಿಷಯ” ಎಂದು ಪರಿಗಣಿಸಿ ಅತ್ಯಾಚಾರಿಗಳೊಂದಿಗೆ ರಾಜಿ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳುತ್ತವೆ. ಸಾಕ್ಷಚಿತ್ರದಲ್ಲಿ ದಾಖಲಾದ ಅನೇಕ ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಪ್ರತಿಪಾದಿಸುವ “ರಾಜಿ” ಕಲ್ಪನೆಯೆಂದರೆ, ಅತ್ಯಾಚಾರಕ್ಕೆ ಒಳಗಾದ ಹದಿಮೂರರ ಹರೆಯದ ಬಾಲೆಯು ತನ್ನ ಒಳಿತಿಗಾಗಿ ಮತ್ತು ಹಳ್ಳಿಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಮರಳಿ ತರಲು ತನ್ನ ಅತ್ಯಾಚಾರಿಗಳಲ್ಲಿ ಒಬ್ಬನನ್ನು ಮದುವೆಯಾಗಬೇಕು ಎನ್ನುವುದು ತಿಳಿದಾಗ, ನಾವೂ ಇಂಥಹದ್ದೇ ಸಮಾಜದ ಅವಿಭಾಜ್ಯ ಭಾಗ ಎನ್ನುವ ನೋವು ಕಾಡದೇ ಇರಲು ಸಾಧ್ಯವಿಲ್ಲ.

ನಿಶಾ ಪಹುಜಾ

“ಟು ಕಿಲ್ ಎ ಟೈಗರ್” ನ ಸಾಕ್ಷ್ಯಚಿತ್ರ ಒಂದು ಪ್ರಮುಖ ಕಥೆಯನ್ನು ಬಲವಾದ ರೀತಿಯಲ್ಲಿ ಹೇಳುತ್ತದೆ. ಚಿತ್ರದುದ್ದಕ್ಕೂ ನಾವು ಅನೇಕ ದುಃಖ ಮಡುಗಟ್ಟುವ ಮತ್ತು ನಮ್ಮೊಳಗೆ ಕೋಪವನ್ನು ಹುಟ್ಟು ಹಾಕುವಂತಹ ದೃಶ್ಯಗಳಿಗೆ ಸಾಕ್ಷಿಯಾಗುತ್ತೇವೆ. ಅತ್ಯಾಚಾರದಂತಹ ಅಪರಾಧಗಳ ಬಗ್ಗೆ ಸ್ಥಳೀಯ ಅಧಿಕಾರಿಗಳು ಹಾಗೂ ಊರ ಜನರ ದೌರ್ಜನ್ಯ ಹಾಗೂ ವರ್ತನೆಗಳ ಬಗ್ಗೆ ನೋಡುವಾಗ ಭಾರತದಲ್ಲಿ ಇನ್ನೂ, ಶಿಕ್ಷಣ ಊರು-ಕೇರಿಗಳಿಗೆ ತಲುಪಿಲ್ಲ ಎಂದು ಅರ್ಥೈಸಬಹುದು. 14 ತಿಂಗಳುಗಳ ಕಾಲ ಪ್ರಕರಣ ಕಾನೂನು ವ್ಯವಸ್ಥೆಯ ಒಳಸುಳಿಗಳೊಳಗೆ ಸುತ್ತು ಹಾಕುತ್ತದೆ. ಅದರಲ್ಲಿರುವ ಸಲಹೆಗಳ ನೋಡಿ ಇದು ಮೌಲ್ಯಯುತವಾಗಿದೆಯೇ ಎಂದು ನಾವು ಕೇಳಿಕೊಳ್ಳಬೇಕಾಗಿದೆ. ಈ ಸಲಹೆಗಳು ಮತ್ತು ಅದರ ಒಳಗಿರುವ ವಿಡಂಬನೆಗಳು ಬಹುತೇಕ ಉಸಿರುಕಟ್ಟುವಂತಿದೆಯಾದರೂ, ಅವೆಲ್ಲವನ್ನೂ ಪೀಡಿತ ಯುವತಿ ಹಾಗೂ ಆಕೆಯ ಕುಟುಂಬ ಸಹಿಸಿಕೊಳ್ಳುವ ಪರಿ ದೇವರಿಗೇ ಪ್ರೀತಿ ಅನ್ನಬೇಕು. ಸಂತ್ರಸ್ತ ಯುವತಿಯನ್ನೇ ದೂರವಿಡುವ ಸಮುದಾಯ, ಈ ಅತ್ಯಾಚಾರಕ್ಕೆ ಯುವತಿಯನ್ನೇ ದೂಷಿಸುವ ಮಟ್ಟಕ್ಕಿಳಿಯುತ್ತದೆ. ಇತರರು “ಮನಸ್ಥಿತಿಯನ್ನು ಪುನರ್ನಿರ್ಮಿಸಲು” ಒಂದು ಮಾರ್ಗವಾಗಿ ಕಾನೂನು ಕ್ರಮ ಕೈಗೊಳ್ಳುವ ನಿರ್ಧಾರವನ್ನು ಬಿಡುವಂತೆ ತಂದೆಯ ಮೇಲೆ ಒತ್ತಡ ತಂದು, ಅದರಲ್ಲಿ ವಿಫಲರಾದಾಗ ಅವನನ್ನು ಸಾಯಿಸುದಾಗಿ ಹಾಗೂ ಮನೆಯನ್ನು ಸುಡುವುದಾಗಿ ಬೆದರಿಕೆ ಹಾಕುತ್ತಾರೆ. “ಅವರು ಇದನ್ನು ಮತ್ತೆ ಮಾಡುವುದಿಲ್ಲ” ಎಂಬ ಭರವಸೆಯೊಂದಿಗೆ ಅ ಪ್ರಕರಣವನ್ನು ಕೈಬಿಡಬೇಕೆಂದು ಅಪರಾಧಿಗಳಲ್ಲಿ ಒಬ್ಬನ ತಂದೆಯು ವಿನಂತಿಸುತ್ತಾರೆ. ಒಂದು ಹಂತದಲ್ಲಿ ಚಿತ್ರದ ನಿರ್ದೇಶಕಿ ಪಹುಜಾ ಮತ್ತು ಅವರ ಸಿಬ್ಬಂದಿಗೆ ಸ್ಥಳೀಯ ವಿಷಯ ಎಂದು ಹೇಳುವ ಮೂಲಕ ಈ ಪ್ರಕರಣದಲ್ಲಿ ಅವರ ನಿರಂತರ ಅಸಕ್ತಿಗಾಗಿ ಬೆದರಿಕೆ ಹಾಕುತ್ತಾರೆ. “ಟು ಕಿಲ್ ಎ ಟೈಗರ್” ಸಾಕ್ಷ್ಯಾಚಿತ್ರವು, ಕಲಾತ್ಮಕ ರೂಪದ ಉದಾಹರಣೆಯಲ್ಲ. ಆದರೆ, ಇದು ಸಂಕೀರ್ಣವಾದ ಒಂದು ಪಿಡುಗಿನ ವಿರುಧ್ದದ ಹೋರಾಟ, ಮಹಿಳೆಯರು ಎದುರಿಸುತ್ತಿರುವ ಕ್ರೌರ್ಯಗಳ ಬಗೆಗಿನ ಚಿತ್ರ.

ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ವರದಿಗಳು ಇದ್ದಾಗಲೆಲ್ಲಾ ಅಪರಾಧಿ ಯಾವಾಗಲೂ ಪುರುಷನೇ. ಮಹಿಳೆಯರನ್ನು ಸಬಲೀಕರಣಗೊಳಿಸುವುದು, ಅವರಿಗೆ ತರಬೇತಿ ನೀಡುವುದು, ಮಹಿಳೆಯರಿಗೆ ಹೇಗೆ ನಿಲುವು ತೆಗೆದುಕೊಳ್ಳಬೇಕು ಎಂಬುದನ್ನು ಕಲಿಸಿದರೆ, ಇಂಥ ಅತ್ಯಾಚಾರ ಹಾಗೂ ಅನಾಚಾರಗಳು, ಅಮಾನವೀಯ ಘಟನೆಗಳು ನಿಲ್ಲುತ್ತವೆ ಎಂದು ನಾವು ಭಾವಿಸಿದ್ದೆವು. ಆದರೆ ಈ ಘಟನೆಗಳು ನಿಲ್ಲಲ್ಲಿಲ್ಲ, ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಯಿತೇ ವಿನ: ಕಡಿಮೆಯಾಗಲಿಲ್ಲ. ಇಂಥ ಹಿಂಸೆ ಹಾಗೂ ಅನಾಚಾರದ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಿದರೆ ಸಾಕಾಗಲ್ಲ ಬದಲಾಗಿ ಪುರುಷರಲ್ಲೂ ಇದರ ಬಗ್ಗೆ ಅರಿವು ಮೂಡಿಸಬೇಕು, ಅವರ ಮನಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಬೇಕೆಂದು ಸರ್ಗೋ ಫೌಂಡೇಶನ್‌ನ ಮಹೇಂದ್ರ ಕುಮಾರ್ ಹೇಳುತ್ತಾರೆ.

ರಂಜಿತ್ ಅವರಂತಹ ತಂದೆಯನ್ನು ಪಡೆಯುವ ಅದೃಷ್ಟ ಪ್ರತಿಯೊಬ್ಬ ಮಗಳಿಗೂ ಇರಬೇಕು ಎನ್ನುವ ಬಯಕೆಯೊಡನೆ, ಈ ಸಾಕ್ಷ್ಯಾಚಿತ್ರ ಭಾರತದ ಕಾನೂನಿನ ಬಗ್ಗೆ ನಮ್ಮಲ್ಲಿ ಮತ್ತಷ್ಟ ಭರವಸೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗುತ್ತದೆ. ಈ ದಾರುಣ ಸಾಕ್ಷ್ಯಚಿತ್ರವು ಇಡೀ ಹಳ್ಳಿಯಿಂದ ಬಹಿಷ್ಕರಿಸಲ್ಪಟ್ಟ ಬಡ ಕುಟುಂಬದ ಅಸಹಾಯಕತೆಯನ್ನು ಮತ್ತು ಕಾನೂನುಬಾಹಿರಗೊಳಿಸಬೇಕಾದ ಸಾಮಾಜಿಕ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಮಹಿಳೆಯರನ್ನು ತಮ್ಮ ಅತ್ಯಾಚಾರಿಗಳನ್ನು ಮದುವೆಯಾಗಲು ಸೂಚಿಸುವುದು ಅಥವಾ ಒತ್ತಾಯಿಸುವುದು ಕ್ರಿಮಿನಲ್ ಅಪರಾಧವಾಗಿರಬೇಕು. ಈ ವರ್ಷದ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲದಿದ್ದರೂ ಸಹ ಈ ಚಿತ್ರ ಹೃದಯವಿದ್ದ ಬಹಳಷ್ಟು ಜನರನ್ನು ಸ್ಪರ್ಶಿಸಿದೆ ಮಾತ್ರವಲ್ಲ ನಮ್ಮನ್ನು ಅಳುವಂತೆ ಮಾಡುತ್ತದೆ.

ಡಯಾನಾ ಶರಲ್ ಲೋಬೊ

Support Kittall

Kittall has been a free portal in konkani, publishing non-stop since 2011.
Kittall publishes poetry, fiction and prose from veteran and youth writers.
Kittall also posts news and news analysis in Konkani, Kannada and English.
Alternative media needs readers support.
Kittall counts on your support in its endeavour of preserving  konkani literature for the generations to come. 

 

5 comments

Gerald Carlo
Gerald Carlo March 19, 2024 - 9:50 am

ನೋಡಲೇ ಬೇಕು ಎನ್ನುವಷ್ಟು ಸೊಗಸಾಗಿದೆ ಬರಹ.

Reply
Diana
Diana March 20, 2024 - 4:29 am

Thank you for your encouraging words.

Reply
Joseph D'mello
Joseph D'mello March 19, 2024 - 6:56 pm

No one knows what victims go through, once they been exposed to violence and sexual assault, until the victims come forward and explains it. This movie seems to be a daring effort at highlighting todays glaring issues regarding women and violence against them. Only when more and more women come forward with their stories, society might learn and open their eyes and will be forced to deal with the issue. Well written article Diana!

Reply
Diana
Diana March 20, 2024 - 4:30 am

Thank you Sir Joseph for your encouraging words.

Reply
Avatar
Flavia Albuquerque March 20, 2024 - 5:18 am

ಚೆನ್ನಾಗಿ ಬರೆಯುತ್ತೀರಿ ಮೇಡಂ. ಇನ್ನೂ ಸಾಕಷ್ಟು ಅನ್ಯ ಭಾಷ ಸಾಹಿತ್ಯ ನಿಮ್ಮಿಂದ ಬರಲಿ. ಬಳಲಿ ಬೆಂಡಾದ ಜೀವಗಳ ನೋವು ಅವರ ಹೋರಾಟ ಇತರರಿಗೂ ಮಾರ್ಗಧರ್ಶನವಾಗಲಿ.

Reply

Leave a Comment

© All Right Reserved. Kittall Publications. 

-
00:00
00:00
Update Required Flash plugin
-
00:00
00:00