ಮಂಗಳೂರು : ಇಲ್ಲಿನ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ರವರು ಇತ್ತೀಚೆಗೆ ನವೀಕರಿಸಿ ಪುನರಾರಂಭಿಸಿದ “ಮಹಾತ್ಮಾ ಗಾಂಧಿ ವಸ್ತುಸಂಗ್ರಹಾಲಯ”ದಲ್ಲಿ ಇದೀಗ ಪ್ರಥಮಬಾರಿ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯನ್ನು ಇದೇ ಶನಿವಾರ ಮೇ 18 ರಂದು ಆಯೋಜಿಸಲಾಗಿದೆ.
ಯುನೆಸ್ಕೊ ಘೋಷಣೆ ಮಾಡಿರುವಂತೆ ಈ ವರ್ಷದ ಮ್ಯೂಸಿಯಂ ದಿನಾಚರಣೆಯ ಮುಖ್ಯ ವಿಷಯವು “ಶಿಕ್ಷಣ ಮತ್ತು ಸಂಶೋಧನೆಗಾಗಿ ವಸ್ತು ಸಂಗ್ರಹಾಲಯಗಳು” ಎಂಬುದಾಗಿದ್ದು, ಬೆಳಿಗ್ಗೆ 10 ಗಂಟೆಗೆ ಪ್ರಾರಂಭಗೊಳ್ಳುವ ಕಾರ್ಯಕ್ರಮದಲ್ಲಿ ಇಂಟ್ಯಾಕ್ (Intach) ಮಂಗಳೂರು ಶಾಖಾ ಸಂಚಾಲಕರಾದ ಶ್ರೀ. ಸುಭಾಸ್ ಚಂದ್ರ ಬಸು ಮುಖ್ಯ ವಿಷಯವನ್ನು ಮಂಡಿಸಿ ಅತಿಥಿಭಾಷಣ ಮಾಡುವರು.
ಕೆನರಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಹಾಗೂ ಇನ್ನಿತರ ಆಸಕ್ತರು ವಸ್ತುಸಂಗ್ರಹಾಲಯವನ್ನು ಸಂದರ್ಶಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮವು ಮುಕ್ತಾಯಗೊಳ್ಳಲಿದೆ. ವಸ್ತುಸಂಗ್ರಹಾಲಯಕ್ಕೆ ಸಂದರ್ಶಕರಿಗೆ ಉಚಿತ ಪ್ರವೇಶದ ಅವಕಾಶವನ್ನು ಒದಗಿಸಲಾಗಿದೆ ಎಂದು ಮ್ಯೂಸಿಯಂ ನಿರ್ದೇಶಕರಾದ ಪಯ್ಯನ್ನೂರು ರಮೇಶ್ ಪೈ ಅವರು ತಿಳಿಸಿದ್ದಾರೆ.