ಭಾಷೆ ಮಾನವನಿಗೆ ದೊರೆತ ಒಂದು ಬಲಿಷ್ಠ ಸಾಧನ. ಅದಾಗ್ಯೂ ಭಾಷೆ ಪರಿಪೂರ್ಣ ಹಾಗೂ ಸಂಪೂರ್ಣ ಸಂವಹನ ಸಾಧನ ಎನ್ನಲಾಗದು. ಭಾಷೆಗಳ ಅನುಪಸ್ಥಿತಿಯಲ್ಲಿ ಮಾನವ ಜನಾಂಗ, ಸಂಸ್ಕೃತಿ ಹಾಗೂ ಆತನ ಐತಿಹಾಸಿಕ ಬೆಳವಣಿಗೆ ಯಾವ ದಾರಿ ಹಿಡಿಯುತ್ತಿತ್ತು ಎನ್ನುವುದು ಅಲೋಚಿಸಲೂ ಶಕ್ಯವಿಲ್ಲ. ಸಾಮಾನ್ಯವಾಗಿ ವಿಶ್ವದ ಎಲ್ಲಾ ಜನರು, ತೀರಾ ಸೀಮಿತ ವಿಷಯಗಳನ್ನು ಹೊರತುಪಡಿಸಿ, ಹಲವಾರು ವಿಷಯಗಳ ಸಾಮ್ಯ ಹೊಂದಿದ್ದರೂ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಭಾಷಾ ಸಂರಚನೆ ಯಾಕೆ ಉಂಟಾಯ್ತು ಎನ್ನುವ ಪ್ರಶ್ನೆ ಹಳೆಯ ಕಾಲದಿಂದ ಪ್ರಾಜ್ಞರನ್ನು ಚಿಂತನೆಗೆ ಒಳಪಡಿಸಿದೆ. ಯಾವ ದೃಷ್ಟಿಯಿಂದ ನೋಡಿದರೂ ಭಾಷೆ ಹಾಗೂ ಅದರ ಅಧ್ಯಯನ ಅಪಾರ ಆಸಕ್ತಿಯ ಕ್ಷೇತ್ರವಾಗಿ ಇಂದಿಗೂ ಉಳಿದಿದೆ. 21 ನೇ ಶತಮಾನದಲ್ಲಿ ಭಾಷೆಗಳು ಹಾಗೂ ಅವುಗಳ ಅಧ್ಯಯನಗಳು ತಂತ್ರಜ್ಞಾನ ಹಾಗೂ ಸಂವಹನ ಸಾಧನಗಳ ನೆರವಿನಿಂದ ಪ್ರಬುದ್ಧವಾಗಿ ಬೆಳೆಯುತ್ತಾ ಇವೆ.
ಯಾವುದೇ ಭಾಷೆಯು ಆ ಭಾಷೆಯನ್ನು ನುಡಿಯುವ ಮನುಷ್ಯರಷ್ಟೆ ಅಥವಾ ಜನಾಂಗದಷ್ಟೇ ಪುರಾತನವಾಗಿರುತ್ತದೆ. ಆದೆ ರೀತಿ ಆ ಭಾಷೆಯನ್ನು ನುಡಿಯುವ ಕೊನೆಯ ವ್ಯಕ್ತಿ ಇರುವ ತನಕ ಆ ಭಾಷೆಗೆ ಸಾವು ಎನ್ನುವುದು ಇಲ್ಲ. ಕೊಂಕಣಿ ಭಾಷೆಯ ಹುಟ್ಟಿನ ಬಗ್ಗೆ ನಿಖರ ತೇದಿ ನಿರ್ಧರಣೆ ಸುಲಭ ಸಾಧ್ಯವಿಲ್ಲದಿದ್ದರೂ ಕಳೆದ ಸಾವಿರ ವರ್ಷಗಳಿಂದ ಈ ಭಾಷೆಯನ್ನು ನುಡಿಯುವ ಜನರು ಭಾರತದಲ್ಲಿ ಇದ್ದರು ಎನ್ನುವುದು ಸಂಶಯಾತೀತ. (ವಾಲ್ಡರ್, ಮಾರ್ಕ್ – ಸಂಪಾದಕೀಯ, ಅಮರ್ ಕೊಂಕ್ಣಿ, 1974 ಎಪ್ರಿಲ್-ಮಂಗಳೂರು)
1976ರಲ್ಲಿ ಭಾರತೀಯ ಕೇಂದ್ರ ಸಾಹಿತ್ಯ ಅಕಾಡೆಮಿಯು ಕೊಂಕಣಿಯನ್ನು ಸ್ವತಂತ್ರ ಭಾಷೆಯೆಂದು ಸ್ವೀಕರಿಸುವುದರೊಂದಿಗೆ ವಾಸ್ತವವಾಗಿ ವಿಲ್ಲಿಯಮ್ ಕ್ಯಾರೀ, ಜಾನ್ ವಿಲ್ಸನ್, ಜಾನ್ ಮುರ್ರೆ ಮಿಶೆಲ್, ಗರ್ಸನ್ ದ ಕುನ್ಹಾ, ಆಂಜೆಲೊ ಮಾಫೆ, ಸಿಲ್ವೆಸ್ಟರ್ ಮಿನೇಜಸ್, ಸುನೀತ ಕುಮಾರ್ ಚಟರ್ಜಿ, ಸುಮಿತ್ರ ಮಂಗೇಶ್ ಖತ್ರೆ ಮುಂತಾದ ಪಂಡಿತರು ಮಂಡಿಸಿದ ‘ಕೊಂಕಣಿಯು ಯಾವುದೇ ರೀತಿಯಲ್ಲಿ ಮರಾಠಿಯ ಉಪಭಾಷೆಯಲ್ಲ ಹೊರತಾಗಿ ಅದು ಒಂದು ಸಂಪೂರ್ಣ ಸ್ವತಂತ್ರ ಭಾಷೆ’ ಎಂಬ ವಾದವನ್ನು ಎತ್ತಿ ಹಿಡಿದಂತಾಗಿದೆ.
ಕೊಂಕಣಿಯು ‘ಕೊಂಕಣಿ ಕರಾವಳಿ’ ಎಂದೇ ಕರೆಯಲ್ಪಡುವ ಭಾರತದ ಪಶ್ಚಿಮ ಕರಾವಳಿಯಲ್ಲಿ (ಮುಖ್ಯವಾಗಿ ಕೊಂಕಣ್ [ಮಹಾರಾಷ್ಟ್ರ], ಗೋವಾ, ಕರಾವಳಿ ಕರ್ನಾಟಕ, ಉತ್ತರ ಕೇರಳ, ದಕ್ಷಿಣ ಗುಜರಾಥದಲ್ಲಿ) ವಿಸ್ತ್ರತವಾಗಿ ಹಬ್ಬಿರುವ ಭಾಷೆಯಾಗಿದೆ. ಅದು ಇಂಡೋ-ಯುರೋಪಿಯನ್ ಭಾಷಾ ಸಮುದಾಯಕ್ಕೆ ಸೇರಿದ ಇಂಡೋ-ಆರ್ಯನ್ ಭಾಷೆಗಳ ಪೈಕಿ ವಾಯುವ್ಯ ಪಂಗಡದ ಭಾಷೆಯಾಗಿದೆ. ಕೊಂಕಣಿಯನ್ನು ಬರೆಯಲು ಭಾರತಾದಾದ್ಯಂತ ಆರಂಭದಿಂದಲೂ ನಾಗರಿ (ದೇವನಾಗರಿ), ಕಾನರಿ/ಕಾನಡಿ (ಕನ್ನಡ), ರೋಮಿ (ರೋಮನ್), ಮಲಯಾಳಿ ಹಾಗೂ ಪರ್ಸೋ-ಅರೆಬಿಕ್ ಲಿಪಿಗಳ ಬಳಕೆ ಆಗುತಿತ್ತು. ಯಾವತ್ತೂ ಈ ಬಳಕೆಗೆ ಯಾವುದೇ ಪ್ರದೇಶ ನಿಷ್ಠತೆ ಕಂಡುಬರುವುದಿಲ್ಲ. (ಪುಟ – 1 ಮಾಡ್ತ, ವಿಲ್ಲಿಯಂ.- ದ ಕ್ರಿಶ್ಚಿಯನ್ ಕೊಂಕಣಿ ಒಫ್ ಸೌಥ್ ಕೆನರಾ-ಎ ಲಿಂಗ್ವಿಸ್ಟಿಕ್ ಎನಾಲಿಸಿಸ್ – 1984 ಪ್ರಸಾರಂಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ)
ಪ್ರಾದೇಶಿಕತೆಯ ಮೇಲೆ ಹೊಂದಿಕೊಂಡು ಕೊಂಕಣಿಯನ್ನು ಬರೆಯಲು ಬಳಸುವ ಲಿಪಿ, ಬರಹ ಶೈಲಿ, ಉಚ್ಛಾರ, ಶಬ್ದಸಂಪದ ಬದಲಾಗುವುದನ್ನು ನಾವು ಕಾಣುತ್ತೇವೆ. ಇಂದು ಕೊಂಕಣಿಯು ಗೋವಾದ ರಾಜ್ಯಭಾಷೆ ಆಗಿದೆ ಹಾಗೂ ಗೋವಾ ಸರ್ಕಾರವು ಅಲ್ಲಿ ನಾಗರಿಯನ್ನು ಆಡಳಿತದಲ್ಲಿ ಕೊಂಕಣಿ ಭಾಷೆಯನ್ನು ಬರೆಯುವ ಅಧಿಕೃತ ಲಿಪಿಯೆಂದು ಘೋಷಿಸಿದೆ.
1961 ರಲ್ಲಿ ಭಾರತದಲ್ಲಿ ಒಟ್ಟು ಕೊಂಕಣಿ ಮಾತೃಭಾಷಿಕರ ಸಂಖ್ಯೆಯು 13,52,363 ಇದ್ದು ಈ ಸಂಖ್ಯೆಯು 2001 ರಲ್ಲಿ 24,89,015 ಕ್ಕೆ ಹೆಚ್ಚಿತ್ತು. ಆದರೆ 2011 ರಲ್ಲಿ ಈ ಸಂಖ್ಯೆಯು 22,56,502 ಎಂದು ದಾಖಲಾಗಿದೆ. (Office of the Registrar General and Census Commissioner of India ರವರ Census of India 2011)
ಗುಜರಾತ ಮತ್ತು ಮಹಾರಾಷ್ಟ್ರಗಳಲ್ಲಿ 1961 ರಿಂದ 2001 ಕ್ಕೆ ಕಂಡು ಬರುವ ಕೊಂಕಣಿ ಮಾತೃಭಾಷಿಕರ ಸಂಖ್ಯೆಯ ತ್ವರಿತ ಹೆಚ್ಚಳಕ್ಕೆ ಮುಖ್ಯ ಕಾರಣ ಕೊಂಕಣಿಗೆ 1976 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ ಸ್ವತಂತ್ರ ಭಾಷೆಯೆಂಬ ಮನ್ನಣೆ ಹಾಗೂ 1992 ರಲ್ಲಿ ರಾಷ್ಟ್ರೀಯ ಭಾಷೆ ಎಂದು ಕೊಂಕಣಿಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ವೀಕರಿಸಿದ್ದು ಆಗಿದೆ. ಮರಾಠಿ ಮಾತೃಭಾಷಿಕರ ಸಂಖ್ಯೆ 1991 ರಿಂದ 2001 ಕ್ಕೆ .46% ಕಡಿಮೆಯಾಗಿರುವುದನ್ನು ಕಾಣಬಹುದಾಗಿದೆ.
ಕೆಲವು ಪ್ರಧಾನ ಭಾಷೆಗಳಿಗೆ ಹೋಲಿಸಿದರೆ 2001 ರಲ್ಲಿ ಕೊಂಕಣಿಯ ಮಾತೃಭಾಷಿಕರ ಸಂಖ್ಯೆಯಲ್ಲಿ ದೊಡ್ಡ ಪ್ರಗತಿ ಕಂಡು ಬಾರದಿರುವುದನ್ನು ಹಾಗೂ 2011 ರಲ್ಲಿ ಕೊಂಕಣಿಯನ್ನು ಮಾತೃಭಾಷಿಕರೆಂದು ಒಪ್ಪುವವರ ಸಂಖ್ಯೆ ಗಣನೀಯವಾಗಿ ಕುಗ್ಗಿರುವುದನ್ನು ಗಮನಿಸಬಹುದಾಗಿದೆ. ಮೂರು ಮುಖ್ಯ ಕಾರಣಗಳನ್ನು ಇದಕ್ಕೆ ನೀಡಬಹುದು.
1. ಕೊಂಕಣಿಗೆ ಇನ್ನೂ ಲಭಿಸಬೇಕಾದಷ್ಟು ರಾಜಾಶ್ರಯ ಲಭಿಸದಿರುವುದು – ಇದರ ಪರಿಣಾಮವಾಗಿ ಕೊಂಕಣಿಗರು ತಮ್ಮ ಮಾತೃಭಾಷೆ ಕೊಂಕಣಿ ಎಂದು ಮುಕ್ತವಾಗಿ ಒಪ್ಪಿಕೊಳ್ಳುವಲ್ಲಿ ತೊಂದರೆ ಇರುವಂತಹದು.
2. ಸಾಮಾನ್ಯವಾಗಿ ಭಾರತೀಯರು ಬಹುಭಾಷಿಕರಾಗಿದ್ದು ಮಾತೃಭಾಷೆಯ ಕುರಿತು ಮಾತ್ರ ನಿಷ್ಠೆ ಎಂಬ ಚಿಂತನೆಗೆ ಒಳಗಾಗದೆ ಇರುವಂತಹದು.
3. ಗುಜರಾತ ಮತ್ತು ಮಹಾರಾಷ್ಟ್ರದಲ್ಲಿ ಕೊಂಕಣಿ ಮಾತೃಭಾಷಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಇದೆ. ಅಲ್ಲಿನ ರಾಜ್ಯಭಾಷೆಗಳನ್ನು ಜನರು ತಮ್ಮ ಮಾತೃಭಾಷೆಯೆಂದು ದಾಖಲಿಸಿರಬಹುದು.
ಅದಾಗ್ಯೂ ಕೊಂಕಣಿಯು ಭಾರತೀಯ ಭಾಷಾ ಸಮುದಾಯದಲ್ಲಿ ಒಂದು ಸುದೃಢ, ಸಂಪನ್ಮೂಲಭರಿತ ಭಾಷೆಯಾಗಿ ಮುಂದುವರೆದಿದೆ ಎಂದರೆ ತಪ್ಪಾಗಲಾರದು.
ಕೊಂಕಣಿ ಭಾಷೆಗೆ ಹದಿನೇಳು ಪ್ರಭೇದಗಳಿವೆ. (ಭಟ್ಕಳಿ, ಗೋವಾನೀಜ್, ಕಾರ್ವಾರೀ, ಕುಡುಬಿ, ಚೆಟ್ಟಿಭಾಷಾ, ಗೌಢ ಪ್ರಾಕ್ರತ, ಕೊಬ್ಬಿಲಿ, ಕುಮ್ಕಿ, ದಾಲ್ದಿ, ಗೌಢ ಸಾರಸ್ವತ, ಕೊಂಕಣಿ, ಮಾಲ್ವಾಣಿ, ಫಿರಂಗಿ, ಕೊರ್ಲೊಣಿ, ಮೋಪಣ್, ನವಾಯ್ತಿ, ಕಾಂಗೊಣಿ / ಕಾರ್ಗೊಣಿ) ಈ ಪ್ರಭೇದಗಳ ಪೈಕಿ ಕೊಂಕಣಿ ಪ್ರಭೇದದ ಬಳಕೆ ಸಾಮಾನ್ಯವಾಗಿ ಹೆಚ್ಚಿರುವುದರಿಂದ ಈ ಪ್ರಭೇದದ ಕೊಂಕಣಿಯನ್ನೇ ಪ್ರಮಾಣ ಕೊಂಕಣಿ ಎಂದು ಗುರುತಿಸುವ ಪದ್ಧತಿ ಬೆಳೆದಿದೆ.
ಕೊಂಕಣಿಗೆ ಏಳು ಉಪ ಭಾಷಾ ಪ್ರಭೇದಗಳನ್ನು ಭಾಷಾ ಶಾಸ್ತ್ರಜ್ಞರು ಗುರುತಿಸಿದ್ದಾರೆ. ಖ್ಯಾತ ಭಾಷಾಶಾಸ್ತ್ರಜ್ಞ ಡಾ. ಒಲಿವಿನ್ಹೊ ಗೋಮ್ಸ್‌ರವರ ಪ್ರಕಾರ ಶಷ್ಟೀ, ಕಾರ್ವಾರೀ, ಬಾಹರ್ದೇಶೀ, ಮಂಗ್ಳೂರೀ, ಕೊಡಿಯಾಳೀ, ಅಂತ್ರೂಝಿ, ಕೇರಳೀ ಎನ್ನುವವೇ ಈ ಉಪಭಾಷೆಗಳು. ಹೆಸರುಗಳೇ ಹೇಳುವಂತೆ ಈ ಉಪಭಾಷೆಗಳು ನಿರ್ದಿಷ್ಟ ಸ್ಥಳ ಮೂಲದಿಂದ ಬೆಳೆದಿವೆ. ಉದಾಹರಣೆಗೆ ಶಷ್ಟೀ ಉಪಭಾಷೆಯು ಶಷ್ಟೀ (ಗೋವಾದ ಭಾಗ)ಯಲ್ಲಿ ಬಹು ಬಳಕೆಯಲ್ಲಿರುವ ಪ್ರಭೇದವಾದರೆ ಕಾರ್ವಾರಿಯೂ ಕಾರವಾರದಲ್ಲಿ ಪ್ರಚಲಿತವಾಗಿರುವ ಭಾಷಾ ಪ್ರಭೇದ.
ಎನ್.ಜಿ. ಖೆಳೇಕಾರರು ತಮ್ಮ ಅಧ್ಯಯನದಲ್ಲಿ ಕೊಂಕಣಿಯನ್ನು ಮುಖ್ಯ ಮೂರು ಪ್ರಾಂತೀಯ ವಿಭಜನೆಗಳಲ್ಲಿ ಹಂಚಿಹಾಕುತ್ತಾರೆ.
1. ಉತ್ತರದ ಕೊಂಕಣಿ – ಇದು ಹೆಚ್ಚಾಗಿ ಮರಾಠಿ ಪ್ರಭಾವ ಹೊಂದಿದ್ದು ಮಹಾರಾಷ್ಟ್ರ ಭಾಗಗಳಲ್ಲಿ ಬಳಸಲ್ಪಡುತ್ತದೆ.
2. ಕೇಂದ್ರ ಭಾಗದ ಕೊಂಕಣಿ – ಇದು ಹೆಚ್ಚಾಗಿ ಗೋವಾದ ಭಾಗಗಳಲ್ಲಿ ಬಳಸಲ್ಪಡುತ್ತದೆ ಹಾಗೂ ಪೋರ್ಚುಗೀಸ್ ಪ್ರಭಾವ ಹೊಂದಿದೆ.
3. ದಕ್ಷಿಣ ಕೊಂಕಣಿ – ಇದು ಹೆಚ್ಚಾಗಿ ಕರ್ನಾಟಕ ಮತ್ತು ಕೇರಳದ ಭಾಗಗಳಲ್ಲಿ ಬಳಸಲ್ಪಡುತ್ತದೆ ಹಾಗೂ ಸ್ಥಳೀಯ ಭಾಷೆಗಳಾದ ತುಳು, ಕನ್ನಡ ಮತ್ತು ಮಲಯಾಳಮ್ಮಿನ ಪ್ರಭಾವ ಹೊಂದಿದೆ.
ಕೊಂಕಣಿಯ ಮಟ್ಟಿಗೆ ಭಾಷೆಯ ಹೆಸರಿನೊಂದಿಗೆ ಜನರನ್ನು ಗುರುತಿಸುವ ಪದ್ಧತಿ ಇದೆ. ಕೊಂಕಣಿ ಭಾಷಿಕರನ್ನು ಕೊಂಕ್ಣಿ/ಕೊಂಕಣ ಎಂದೇ ಕರೆಯುವ ವಾಡಿಕೆ ಇದೆ. ಉದಾಹರಣೆಗೆ ಕೊಂಕಣಿ ಮಾತೃಭಾಷಿಕ ಕ್ರೈಸ್ತರನ್ನು ಕೊಂಕಣಿ ಕ್ರೈಸ್ತರೆಂದೇ ಕರೆಯುತ್ತಾರೆ. ಕೊಂಕಣಿ ಮಾತೃಭಾಷಿಕ ಹಿಂದೂಗಳನ್ನು ಹೆಚ್ಚಾಗಿ ಕೊಂಕಣಿಗರೆಂದೇ ಕರೆಯುತ್ತಾರೆ. ಡಾ. ರಿಚ್ಚಾರ್ಡ್ ರೇಗೊರವರು ತಮ್ಮ ‘ಸುವರ್ಣ ಕರ್ನಾಟಕಾಂತ್ ಕೊಂಕ್ಣಿ ಲೋಕ್’ ಎಂಬ ಅಧ್ಯಯನ ಗ್ರಂಥದಲ್ಲಿ ಮೂವ್ವತ್ತೆರಡು ಕೊಂಕಣಿ ಮಾತೃಭಾಷಿಕ ಸಮುದಾಯಗಳ ಮಾಹಿತಿಯನ್ನು ನೀಡುತ್ತಾರೆ. ಮುಂದುವರಿದು ಅವರು ಇನ್ನೂ ಹಲವಾರು ಕೊಂಕಣಿ ಮಾತೃಭಾಷಿಕ ಸಮುದಾಯಗಳು ಬೆಳಕಿಗೆ ಬಾರದೆ ಉಳಿದಿರುವ ಸಾಧ್ಯತೆಯ ಕುರಿತು ತಿಳಿಸುತ್ತಾರೆ.
ಹಿಂದೂಗಳ ಪೈಕಿ ದೈವಜ್ಞ ಬ್ರಾಹ್ಮಣರು, ಸಾರಸ್ವತ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ಕರಾಡ ಮರಾಠೀಯ ಬ್ರಾಹ್ಮಣರು, ರಾಜವಾಡೆ ಸಾರಸ್ವತರು, ಖಾರ್ವಿಗಳು, ಕೊಂಕಣಸ್ಥರು, ಬಾಲವಳೀ ಸಾರಸ್ವತರು, ಸೋನಗಾರರು, ಗೌಳಿಗಳು, ಸಿದ್ಧಿಗಳು, ಕೊಂಕಣಿ ಮಾತೃಭಾಷಿಕರಾಗಿದ್ದಾರೆ. ಅದೇ ರೀತಿ ಕ್ರೈಸ್ತರ ಪೈಕಿ ಬಾಮಣ್, ಚಾರೋಡಿ, ರೆಂದೇರ್, ಗೌಡಿ ವರ್ಗದವರ ಮಾತೃಭಾಷೆ ಕೊಂಕಣಿ. ಮುಸಲ್ಮಾನ್ ಧರ್ಮಾನುಸಾರಕರ ಪೈಕಿ ನವಾಯತರು, ದಾಲ್ದಿಗಳು ಕೊಂಕಣಿ ಮಾತೃಭಾಷಿಕರು. ಹೀಗೆ ಕೊಂಕಣಿ ಹಲವು ಜನರ, ಹಲವು ಜನಾಂಗಗಳ, ವಿವಿಧ ಧರ್ಮಾನುಸಾರಕರ ಭಾಷೆ. ಈ ವಿವಿಧತೆಯೇ ಕೊಂಕಣಿಯ ಸಂಪತ್ತು ಎನ್ನುವುದರಲ್ಲಿ ಸಂಶಯವಿಲ್ಲ.
ಹಿಂದೂ ಕೊಂಕಣಿಗರಲ್ಲಿ ಆರ್ಯ ಸಂಪ್ರದಾಯಿಗಳೂ, ದ್ರಾವಿಡ ಸಂಪ್ರದಾಯಿಗಳೂ ಕೊಂಕಣಿಗರಿದ್ದಾರೆ. ಈ ಕೊಂಕಣಿ ಮಾತೃಭಾಷಿಕ ಸಮುದಾಯಗಳ ಪೈಕಿ ಒಂದು ಸಮುದಾಯದ ಕೊಂಕಣಿ ಇನ್ನೊಂದು ಸಮುದಾಯದ ಕೊಂಕಣಿಗಿಂತ ಭಿನ್ನ, ಉದಾಹರಣೆಗೆ ಒಂದೇ ಧಾರ್ಮಿಕ ಹಿನ್ನೆಲೆ (ಮುಸ್ಲಿಂ) ಉಳ್ಳ ಮೂರು ಸಮುದಾಯಗಳಾಗಿರುವ ನವಾಯ್ತಿ, ಜಮಾಯ್ತಿ, ದಾಲ್ದಿ ಜನರ ಬಳಕೆಯ ಕೊಂಕಣಿಯನ್ನು ಆಳದಲ್ಲಿ ವಿಶ್ಲೇಷಿಸಿದಾಗ ಸ್ಪಷ್ಟ ವ್ಯತ್ಯಯಗಳನ್ನು ಹಾಗೂ ವ್ಯತ್ಯಾಸಗಳನ್ನು ಕಾಣಬಹುದು.
ಕೊಂಕಣಿ ಹಲವು ರಾಜಕೀಯ ವಲಯಗಳ ಭಾಷೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ಕೇರಳಗಳಲ್ಲಿ ಮುಖ್ಯವಾಗಿ ಕೊಂಕಣಿ ಮಾತೃಭಾಷಿಕರು ಸ್ಥಳೀಯ ಭಾಷೆಗಳ ಜನರೊಂದಿಗೆ ಸಾಮರಸ್ಯದ ಸಹಬಾಳ್ವೆ ನಡೆಸುತ್ತಾರೆ. ಇಂದು ಜಾಗತಿಕ ಬೆಳವಣಿಗೆಗಳು ಕೊಂಕಣಿಗರನ್ನು ಆಸ್ಟ್ರೇಲಿಯಾ, ಕೆನಡಾ, ಆಮೇರಿಕೆಯ ಸಂಯುಕ್ತ ಸಂಸ್ಥಾನ, ಯುರೋಪ್ ಭೂಖಂಡದ ವಿವಿಧ ಭಾಗಗಳಿಗೆ ತಲುಪಿಸಿವೆ. ಅಲ್ಲೆಲ್ಲಾ ಕೊಂಕಣಿಗರು ಸೌಹಾರ್ದಯುತವಾಗಿ ಬಾಳಿ ಬದುಕುತ್ತಿದ್ದಾರೆ. ನಾಡಿಗೆ ಒಳ್ಳೆಯ ಹೆಸರು ತರುವಲ್ಲಿ ಕೊಂಕಣಿಯ ಪ್ರೇರಣೆಯೂ ಖಂಡಿತಾ ಅವರಿಗೆ ಇದೆ.
‘ಕರ್ನಾಟಕದ ಕೆಲವು ಕೊಂಕಣಿ ಮಾತೃಭಾಷಿಕ ಸಮುದಾಯಗಳಿಗೆ ತಮ್ಮ ಮಾತೃಭಾಷೆಯಿಂದಲೇ ವಿಶಿಷ್ಟ ಪರಿಚಯ ದೊರೆಯುವುದು ಸಾಧ್ಯವಾಗಿದೆ. ಅದೇ ರೀತಿ ಎರಡು ಕೊಂಕಣಿ ಮಾತೃಭಾಷಿಕ ಸಮುದಾಯಗಳ ನಡುವೆ ಕೊಂಕಣಿಯ ಮೂಲಕ ಮಾತ್ರ ಸಂಬಂಧ ಸ್ಥಾಪನೆ ಸಾಧ್ಯವಾಗಿದೆ’ (ಪು 16-17, ರೇಗೊ, ಡಾ ರಿಚ್ಚಾರ್ಡ್, ‘ಸುವರ್ಣ ಕರ್ನಾಟಕಾಂತ್ ಕೊಂಕ್ಣಿ ಲೋಕ್’-ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಲಾಲ್‌ಭಾಗ್ ಮಂಗಳೂರು – 2007)
ಕೊಂಕಣಿಯ ಮೂಲ ಹುಡುಕುವಲ್ಲಿ ಇನ್ನೂ ಸವಾಲುಗಳು :
ಕನ್ನಡದ ಮಹಾನ್ ಪಂಡಿತರಾಗಿ ಬೆಳೆದ ಕೊಂಕಣಿಗ ಮಂಜೇಶ್ವರ ಗೋವಿಂದ ಪೈಯವರು ತಮ್ಮ ಅಧ್ಯಯನದಂತೆ ‘ಕೊಂಕಣಿಯು ಸರಸ್ವತೀ ನದಿ ತೀರದಲ್ಲಿ ನೆಲೆ ಮಾಡಿದ್ದ ವಲಸೆಗಾರ ಸಾರಸ್ವತ ಆರ್ಯರಿಂದಾಗಿ ಹುಟ್ಟಿ ಬೆಳೆಯಿತು ಎಂಬ ವಾದವನ್ನು ಮುಂದಿಡುತ್ತಾರೆ. ಪುರಾಣ ಸಾಹಿತ್ಯ, ವರಾಹಮಿಹಿರನ ಬೃಹತ್ಸಂಹಿತಾ ಮುಂತಾದ ಗ್ರಂಥಗಳ ಆಧಾರದಿಂದ ಇವರು ತಮ್ಮ ವಾದವನ್ನು ಬಲಪಡಿಸುತ್ತಾರೆ. ಪಂಚ ಗೌಡರ ಪೈಕಿ ಸಾರಸ್ವತರೇ ಕುಲೀನತೆಯಲ್ಲಿ ಶ್ರೇಷ್ಠರಾಗಿದ್ದರು ಎಂದು ಅವರು ಹೇಳುತ್ತಾರೆ. ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಬರುವ ಗೋಮಾಂತಕ ದೇಶದ ಆರ್‍ಯನೀಕರಣವನ್ನೂ ಎತ್ತಿ ಹಿಡಿಯುವ ಪೈಗಳು ಈ ಸಾರಸ್ವತರಿಂದಲೇ ಗೋವಾಕ್ಕೆ ಕೊಂಕಣಿ ಭಾಷೆ ಬಂತು. ಹೀಗೆ ಕೊಂಕಣಿಯೂ ನೇರವಾಗಿ ಸಂಸ್ಕೃತದಿಂದಲೇ ಉದಯಿಸಿ ಬೆಳೆಯಿತು ಎಂದು ವಾದಿಸುತ್ತಾರೆ.
ಆಧುನಿಕ ಸಂಶೋಧಕರು ಕೊಂಕಣಿಯ ಆರ್‍ಯಮೂಲ ವಾದವನ್ನು ಒಪ್ಪುವುದಿಲ್ಲ. ಕಾಲಾನುಕಾಲಕ್ಕೆ ಇತಿಹಾಸ ಕ್ಷೇತ್ರದಲ್ಲಿ ಉಂಟಾಗಿರುವ ಹೊಸ ಸಂಶೋಧನೆಗಳು ಅವರ ವಾದಕ್ಕೆ ಬೆಂಬಲಿಗವಾಗಿವೆ. ಅಂಕುಡೊಂಕು ಎಂಬ ಅರ್ಥವು ಕೊಂಕುವಿಗೆ ತೀರಾ ಸೂಕ್ತವಾಗಿದೆ. ಕೊಂಕುನಾಡು, ಬೆಟ್ಟಗುಡ್ಡ, ಹಳ್ಳ ಕಣಿವೆಗಳಿರುವ ನಾಡು ಎಂಬ ಅರ್ಥ ನೀಡುತ್ತದೆ. ಅದೇ ರೀತಿ ‘ಕೊಂಗವನ’ ಎನ್ನುವುದು ‘ಕಳ್ಳು ನೀಡುವ ಒಂದು ಜಾತಿಯ ಮರಗಳ ವನ’ ಎಂದು ಅರ್ಥ ನೀಡುತ್ತದೆ. ಇದೇ ಅರ್ಥದಲ್ಲಿ ‘ಕೊಂದ್ಕನ’ ಎನ್ನುವ ಶಬ್ದ ತಮಿಳು ಪ್ರಾಚೀನ ಕಾವ್ಯ ‘ಶಿಲಪ್ಪಾದಿಕಾರಮ್’ನಲ್ಲಿ ಬಳಸಲಾಗಿದೆ. ಅದೇ ರೀತಿಯಲ್ಲಿ ಕೊಂಕುನಾಡು ಎನ್ನುವುದು ಕೊಂಕ ಜನಾಂಗದವರ ನೆಲೆವೀಡು ಎಂದೂ ಅರ್ಥೈಸಿಕೊಳ್ಳಬಹುದು. ಆದುದರಿಂದ ಒಲಿವಿನ್ಹೋ ಗೋಮ್ಸ್, ವಿ.ಪಿ. ಚವ್ಹಾಣ್ ಮುಂತಾದ ಪಂಡಿತರು ಈ ಒಂದು ನಿರ್ದಿಷ್ಟ ಸ್ಥಳನಾಮವನ್ನು ಕೇಂದ್ರವಾಗಿಟ್ಟುಕೊಂಡು ಕೊಂಕಣಿಯ ಮೂಲವು ಈ ಕೊಂಕಣ ಎಂಬ ಸ್ಥಳದಲ್ಲಿ ಉಂಟಾಯ್ತು. ಆದುದರಿಂದ ಕೊಂಕಣಿಯು ಆರ್‍ಯ ಮೂಲದ ಅಥವಾ ಸಾರಸ್ವತರು ತಂದ ಭಾಷೆಯೇನಲ್ಲ ಎಂದು ವಾದಿಸುತ್ತಾರೆ.
ಸೇಡಿಯಾಪು ಕೃಷ್ಣಭಟರು ನೆರೆಯ ತುಳು, ಕನ್ನಡ ಭಾಷೆಗಳ ಬರಹ ಪ್ರಕ್ರಿಯೆಗಳ ನೆರವಿನಿಂದ ಕೊಂಕಣ ಎಂಬ ಶಬ್ದವು ಆ ಪ್ರದೇಶದ ಭೌಗೋಳಿಕ ನಿಮ್ನೋನ್ನತ ಸ್ವರೂಪದಿಂದ ಬಂದಿರಬಹುದು ಎಂದು ವಾದಿಸುತ್ತಾರೆ. ಕೊಂಕ, ಗೂಂಕ ಮುಂತಾದ ಶಬ್ದಗಳ ಸ್ವರೂಪ ಇದೇ ಆಗಿದೆ ಎಂದು ಅವರು ತಿಳಿಸುತ್ತಾರೆ. (ಸೇಡಿಯಾಪು ಕೃಷ್ಣ ಭಟ್ಟ – ತುಳು ಶಬ್ದಾರ್ಥ ಮತ್ತು ಚೇರ-ಕೊಂಕಣ-ಕೆಲವು ದೇಶನಾಮಗಳು)
‘ಕೋಹ್’ ಎಂದರೆ ಪರ್ವತವೆಂದೂ ‘ಕುಂದ’ ಎಂದರೆ ಹೊಂಡವೆಂದೂ ಅರ್ಥ ಇರುವುದು. ಈ ಎರಡು ಪದಗಳು ಸೇರಿ ‘ಕೊಂಕಣಿ’ ಪದ ಹುಟ್ಟಿರುವ ಸಾಧ್ಯತೆ ಇದೆ. ಆಳ ಕಣಿವೆಗಳ ಮತ್ತು ನೀಳ ಬೆಟ್ಟಗಳ ನಾಡಾದ ಕೊಂಕಣಕ್ಕೆ ಅದರ ಭೂ ಪ್ರದೇಶದಿಂದ ಇಂತಹ ಹೆಸರು ಬರುವ ಹಾಗೂ ಇಲ್ಲಿಯ ಭಾಷೆಗೆ ಅದೇ ಸಾಮ್ಯತೆಯ ಹೆಸರು ಸಿಗುವ ಎಲ್ಲಾ ಸಾಧ್ಯತೆಯ ಕುರಿತೂ ವಾದಿಸಲಾಗುತ್ತಿದೆ (ಪು.ಸಂ 5-6, ವಿ.ಪಿ. ಚವ್ಹಾಣ್, – ದ ಕೊಂಕಣ್ ಏಂಡ್ ದ ಕೊಂಕಣಿ ಲ್ಯಾಂಗ್ವೇಜ್)
ದಕ್ಷಿಣ ಏಷ್ಯಾದ ಮೂಲ ನಿವಾಸಿ ಜನರ ಆಡು ಭಾಷೆಯ ಮೇಲೆ ಕ್ರಮೇಣ ವಿವಿಧ ಭಾಷೆಗಳ ಪ್ರಭಾವ ಬಿದ್ದು ಹೊಸ ಹೊಸ ಭಾಷೆಗಳು ರೂಪುಗೊಂಡವೆಂದೂ ಅದೇ ರೀತಿ ಕೊಂಕಣ ತೀರದ ಕೊಂಗ ಮೂಲಜನರ ಆಡು ನುಡಿಯ ಮೇಲೆ ಪ್ರಾಕೃತ ಹಾಗೂ ಉತ್ತರ ಮಹಾರಾಷ್ಟ್ರೀ ಭಾಷೆಗಳ ಪ್ರಭಾವ ಬೀಳುತ್ತಾ ಕೊಂಕಣಿಯು ಬೆಳೆಯಿತೆಂದು ಡಾ. ಒಲಿವಿನ್ಹೋ ಗೋಮ್ಸ್ ವಾದಿಸುತ್ತಾರೆ. ಅವರ ಪ್ರಕಾರ ಕ್ರಮೇಣ ಕೊಂಕಣಿಯು ಸಂಸ್ಕೃತದ ಚೊಚ್ಚಲ ಮಗಳು ಎಂಬ ಅಭಿದಾನವನ್ನೇ ಸಂಪಾದಿಸಿತು. (ಕೊಂಕಣಿ ಒಂದು ಮೇಲ್ನೋಟ, ಪುಸಂ. ೩೫ – ೩೭ ಕೊಂಕಣಿ ಭಾಷೆ-ಸಾಹಿತ್ಯ, ಸಂ. ಮುರುಳೀಧರ ಉಪಾಧ್ಯ ಹಿರಿಯಡಕ, ಕೊಂಕಣಿ ಅಧ್ಯಯನ ಪೀಠ, ಉಡುಪಿ.)
ಪರಶುರಾಮ ಸೃಷ್ಟಿಯ ಕುರಿತು ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಬರುವ ಎಲ್ಲಾ ವಿವರಗಳು ಪಶ್ಚಿಮ ಕರಾವಳಿಯ ಉದ್ದದ, ಮುಖ್ಯವಾಗಿ, ದಕ್ಷಿಣದ ಭೂಪ್ರದೇಶಗಳಿಗೂ ಅನ್ವಯಿಸಬಹುದೆಂದೂ, ಆ ವಿವರಗಳು ಯಾವುದೇ ರೀತಿಯಲ್ಲಿ ಗೋವಾ ನಿರ್ದಿಷ್ಠವಲ್ಲವೆಂದೂ, ಅವುಗಳು ವಿಂಧ್ಯಾ ದಕ್ಷಿಣದ ಆರ್ಯನೀಕರಣ ಪ್ರಕ್ರಿಯೆಯ ಭಾಗವಾಗಿಯಷ್ಟೇ ಪರಿಗಣಿಸಲ್ಪಡಬೇಕೆಂದು ಅಧ್ಯಯನಗಳು ತಿಳಿಸುತ್ತವೆ. ಸ್ಕಂದಪುರಾಣದ ನಂತರ ಪರಶುರಾಮ ಸೃಷ್ಟಿಯ ಹಾಗೂ ಆ ನಂತರ ಬ್ರಾಹ್ಮಣರಿಗೆ ಭೂದಾನದ ಕುರಿತಾದ ವಿವರಗಳು ಗ್ರಾಮ ಪದ್ಧತಿ, ಕೇರಳೊಳ್‌ಪತಿ, ಗೋಕರ್ಣಕ್ಷೇತ್ರ ಮಹಾತ್ಮೆ ಮುಂತಾದ ಕೃತಿಗಳಲ್ಲಿ ದೊರೆಯುತ್ತವೆ. ಈ ಎಲ್ಲವುಗಳನ್ನು ಪರಿಶೀಲಿಸಿದಾಗ ಗೋವಾಕ್ಕೆ ಸಾರಸ್ವತರ ಹಾಗೂ ಅವರೊಂದಿಗೆ ಕೊಂಕಣಿಯ ಆಗಮನದ ವಾದ ಹೆಚ್ಚು ವೈಜ್ಞಾನಿಕವಾಗಿಲ್ಲ ಎಂದು ತಿಳಿಯುತ್ತದೆ. (ಸರಿತಾ ಎಸ್. ನಾಯಕ್ ತಾರಿ-ಸಹ್ಯಾದ್ರಿ ಖಂಡ ಎಂಡ್ ಆರ್ಯನೈಜೇಶನ್ ಆಫ್ ಗೋವಾ -ಅಕಾಡೆಮಿಕ್ ಸ್ಟಾಫ್ ಕಾಲೇಜ್ – ಯುನಿವರ್ಸಿಟಿ ಆಫ್ ಕೇರಳ ತಿರುವನಂತಪುರಮ್ -2003)
ರೆವರೆಂಡ್ ಹಾಫ್‌ಮನರು ತಮ್ಮ Encyclopaedia Mundarica ಕೃತಿಯಲ್ಲಿ ಮುಂಡಾರಿ ಭಾಷೆಯ ಅಧ್ಯಯನ ಮಾಡುತ್ತಾ ಆ ಭಾಷೆಗೂ ಕೊಂಕಣಿಗೂ ಇರುವ ಸಾಮ್ಯವನ್ನು ಗುರುತಿಸಿದರು. ಮುಂಡಾರಿ ಮಧ್ಯಭಾರತದ ಮುಂಡ ಆದಿವಾಸಿಗಳ ಭಾಷೆ. ಕೊಂಕಣಿಯನ್ನು ಬಳಸುವವರಲ್ಲಿ ಕೂಡಾ ನಿರ್ದಿಷ್ಠ ಅದಿವಾಸಿಗಳು ಮೂಲ ಬಳಕೆದಾರರು ಎಂದು ಸಂಶೋಧಕರ ವಾದವಾಗಿದೆ. ‘ಕೊಂಕ’ ಮೂಲವಾಸಿಗಳು, ಗೌಡಿಗಳು, ಕುಣುಬಿಗಳೇ ಈ ಆದಿವಾಸಿಗಳು.
ಭಾರತೀಯ ಭಾಷಾಶಾಸ್ತ್ರದ ಮಹಾನ ಪಂಡಿತರಾದ ಸುಮಿತ್ರ ಮಂಗೇಶ ಖತ್ರೆಯವರ ಪ್ರಕಾರ ಕೊಂಕಣಿ ಯಾವುದೇ ಸಂದರ್ಭದಲ್ಲಿ ರಾಜಾಶ್ರಯ ಪಡೆದ ಭಾಷೆಯಾಗಿರಲಿಲ್ಲ. ಕೊಂಕಣಿಯ ಅಧ್ಯಯನದ ಆರಂಭಕಾರನೆಂದೆ ಗುರುತಿಸಲಾಗಿರುವ ತೋಮಸ್ ಸ್ಟೀವನನು ಕೂಡಾ ಮರಾಠಿಯಿಂದಲೇ ಆರಂಭಿಸುತ್ತಾನೆ ಎಂದಾದರೆ ಆತನ ಕಾಲದಲ್ಲಿಯೇ ಕೊಂಕಣಿ ಸಾಹಿತ್ಯದ ಅಲಭ್ಯತೆ ಕಂಡು ಬರುತ್ತದೆ ಎನ್ನುವುದು ಅವರ ವಾದ. ಅವರ ಪ್ರಕಾರ ಕೊಂಕಣಿಯ ಮೂಲದ ಬಗೆಗಿನ ಸಂಶೋಧನೆಯು ಇನ್ನೂ ವ್ಯವಸ್ಥಿತವಾಗಿ ನಡೆದು ಸತ್ಯಂಶಗಳು ಸ್ಪಷ್ಟವಾಗಬೇಕಾಗಿವೆ. (Very little is known about the early history of Konkani. The first notice and description of the language is to be found in Father Stephens’ grammar. It is commonly averred that before the advent of the Portuguese there was a flourishing Konkani literature in Goa which was destroyed by the Portuguese inquisition. But the fact that the Christian Missionaries themselves were studying the native tongue shows that the mother tongue continued to be in vogue in spite of persecutions. But, of literature we have no trace)
ಖತ್ರೆಯವರು ಕೊಂಕಣಿಯ ಮೂಲ ಇವರಿಂದಲೇ ಉಂಟಾಯ್ತು ಅಥವಾ ಈ ನಿರ್ದಿಷ್ಟ ಜನರೇ ಕೊಂಕಣಿಯ ಹುಟ್ಟು ಮತ್ತು ಬೆಳವಣಿಗೆಗೆ ಕಾರಣರು ಎಂಬ ವಾದವನ್ನು ಒಪ್ಪುವುದಿಲ್ಲ ಮಾತ್ರವಲ್ಲ ಸಂಸ್ಕೃತ ಮೂಲದ ಜನರಿಂದಾಗಿ ಕೊಂಕಣಿಯು ಗೋವಾಕ್ಕೆ ಆಗಮಿಸಿತು ಎನ್ನುವ ಸಿದ್ಧಾಂತವನ್ನು ಅಲ್ಲಗಳೆಯುತ್ತಾರೆ. (The entry of Sarasvats into Goa is still a matter for historical investigation; for they look upon Kashmir as their place of origin and the details of their journey are depending upon mythical and semi historical facts contained in the Sahyadri Skanda Purana.-ಪು.ಸಂ. 175-178 ದ ಫೊರ್ಮೇಷನ್ ಆಫ್ ಕೊಂಕಣಿ – ಎಸ್.ಎಮ್. ಖತ್ರೆ, ಡೆಕ್ಕನ್ ಕಾಲೇಜ್ ಪೂನಾ 1966)
ಸುಮಿತ್ರ ಮಂಗೇಶ ಖತ್ರೆಯವರು ನೀಡುವ ವ್ಯಾಖ್ಯಾನವು ಕೊಂಕಣಿಯ ಕುರಿತಾದ ಅಧ್ಯಯನಗಳಲ್ಲಿ ಹೆಚ್ಚು ಸ್ಪಷ್ಟವೆಂದು ತೆಗೆದುಕೊಳ್ಳಲು ಯೋಗ್ಯವಾಗಿದೆ. ಅವರ ವಾದಸರಣಿಯು ಅಲ್ಲಿಂದ ಮುಂದಿನ ಅಧ್ಯಯನಗಳಿಗೆ ಪೂರಕವಾಗಿಯೂ ಇದೆ. ‘Viewing the conditions today we may safely presume that Konkani was not the language of a single group including Brahmins as well as non Brahmins… It is a rich blend of many groups… as instanced by the sonars of Goa or the Gavdis of two Canaras..
ಆಧುನಿಕ ಸಂಶೋಧಕರು ತಿಳಿಸುವಂತೆ ಆರ್ಯನೀಕರಣದ ಪ್ರಕ್ರಿಯೆಯ ನಿರಂತರತೆಯ ಫಲವಾಗಿ ಸಪ್ತಸಿಂಧೂ ವಲಯದಿಂದ ಕೊಂಕಣದತ್ತ ಬಂದ ಆರ್‍ಯರು ಸುಮಾರು ಕ್ರಿಸ್ತಶಕ ಎರಡು-ಮೂರನೇ ಶತಕದ ಕಾಲದಲ್ಲಿ ಗೋವಾದಲ್ಲಿ ತಮ್ಮ ನೆಲೆಗಾರಿಕೆಯನ್ನು ಭದ್ರಪಡಿಸಿದರು. ಸ್ಕಂದ ಪುರಾಣದ ಸಹ್ಯಾದ್ರಿ ಖಂಡದ ಪರಿಕಲ್ಪನೆಗಳ ಬಲವಾದ ಬಳಕೆಯಿಂದಾಗಿ ಆದಿವಾಸಿಗಳು ಅಸ್ಥಿರರಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಬಲಹೀನರಾದರು. ಇದರ ಪರಿಣಾಮವಾಗಿ ದಸ್ಯುಗಳಾದವರು ವಿಜೇತರ ಭಾಷೆಯನ್ನೇ ಸರ್ವಸಾಮಾನ್ಯ ಭಾಷೆಯೆಂದು ಬಳಸುತ್ತಾ ಆದಿವಾಸಿಗಳ ಭಾಷೆಯು ಸಂಸ್ಕೃತದ ಸಂರಚನೆಯನ್ನು ತನ್ನದಾಗಿಸಿಕೊಳ್ಳತೊಡಗಿತು. ಕ್ರಮೇಣ ಕೊಂಕಣಿ ಸಂಸ್ಕೃತದ ನಂತರದ ಪ್ರಮುಖ ಇಂಡೋ ಆರ್ಯನ್ ಭಾಷೆಯೆಂಬ ಹೆಸರು ಪಡೆಯತೊಡಗಿತು.
ಪ್ರಖ್ಯಾತ ಭಾಷಾ ವಿಜ್ಞಾನಿ ವಿಲ್ಲಿಯಂ ಮಾಡ್ತಾರವರು ಕೂಡಾ ಕೊಂಕಣಿ ಭಾಷೆಯ ಮೂಲದ ಕುರಿತು ಇನ್ನಷ್ಟು ಸಂಶೋಧನೆಯಾದ ಬಳಿಕವೇ ಸ್ಪಷ್ಟತೆ ಮೂಡಬಹುದು ಎಂದು ವಾದಿಸುತ್ತಾರೆ. ‘ಕೊಂಕಣಿ ಭಾಷೆಯ ಮೇಲೆ ಉಂಟಾಗಿರುವ ಪ್ರಾಕೃತ ಪ್ರಭಾವವನ್ನು ಕಂಡು ಅದು ಇಂಡೋ ಆರ್ಯನ್ ಭಾಷಾ ಮೂಲಕ್ಕೆ ಸೇರಿದ್ದು ಎಂದು ವಾದಿಸುವುದು ಅವಸರದ ಕ್ರಿಯೆ. ಕೊಂಕಣಿ ಮಾತೃಭಾಷಿಕ ಆದಿವಾಸಿ ಪಂಗಡಗಳಾದ ಕೊಂಕ, ಖೊರ್ಲಾನಿ, ಕುಂಡ್ಬಿ, ಗೌಡಿ, ಸಿದ್ದಿ, ಗೌಳಿ ಜನಾಂಗಗಳ ಜನರು ಬಳಸುವ ಕೊಂಕಣಿ ಪ್ರಭೇದದ ಆಳ ಅಧ್ಯಯನ ಮಾಡಿ ಸಮಗ್ರ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ಆ ತನಕ ನಮ್ಮ ಎಲ್ಲಾ ವಾದಗಳು ಬರೇ ಮಂಡನೆಗಳಷ್ಟೇ’ ಎಂದು ಅವರು ತಿಳಿಸುತ್ತಾರೆ.
ಅದೇನೇ ಇದ್ದರೂ ವಿಸ್ತೃತ ಅಧ್ಯಯನ, ವೈಜ್ಞಾನಿಕ ಸಂಶೋಧನೆಯ ಬಲವಿಲ್ಲದೆ ಭಾವುಕವಾಗಿ ‘ಕೊಂಕಣಿ ನಿರ್ಧಿಷ್ಟ ಮೂಲಕ್ಕೆ ಮಾತ್ರ ಸೇರಿದ್ದು’ ಎಂದು ವಾದಿಸುವುದು, ಕೊಂಕಣಿ ಸಂಸ್ಕೃತಿ ಎಂದರೆ ನಿರ್ದಿಷ್ಟ ಜಾತಿ ಜನಾಂಗದ ಸಂಸ್ಕೃತಿ ಮಾತ್ರ ಎಂದು ನಂಬಿಸುವುದು ಪ್ರಜಾತಾಂತ್ರಿಕ ಚಿಂತನೆಯ ವಿರುದ್ಧವಾಗುತ್ತದೆ. ಮಾತ್ರವಲ್ಲ ತಳಮಟ್ಟದ ಸಂಸ್ಕೃತಿಯ ಮೂಲಗಳನ್ನು ನಾಶಪಡಿಸುವ, ಅದರ ಬಲ ಕುಗ್ಗಿಸುವ ಚಿಂತನೆಯಾಗುತ್ತದೆ. ಅದು ಭಾರತೀಯ ದೃಷ್ಟಿಕೋನವಾಗಲು ಸಾಧ್ಯವಿಲ್ಲ. ಎಲ್ಲಾ ಚಿಂತನೆಗಳನ್ನು ಸಮಾನವಾಗಿ, ಮುಕ್ತವಾಗಿ ಸ್ವೀಕರಿಸುವವರು ನಾವು. ಹಾಗೆ ಆದಾಗ ಮಾತ್ರ ಅಭಿವೃದ್ಧಿಪರ ಶಿಕ್ಷಣ ಸಾಧ್ಯ. ಆದುದರಿಂದ ಕೊಂಕಣಿ ಆರ್ಯ ಮೂಲದ ಭಾಷೆಯೆ? ಸ್ಥಳೀಯ ದ್ರಾವಿಡ ಆದಿವಾಸಿ ಜನಾಂಗಗಳ ಭಾಷೆಯೆ? ಎನ್ನುವ ಕುರಿತು ವೈಜ್ಞಾನಿಕ ಅಧ್ಯಯನ ತ್ವರಿತವಾಗಿ ನಡೆಯಬೇಕಾಗಿದೆ.
■ ಸ್ಟೀವನ್ ಕ್ವಾಡ್ರಸ್
ಸಹ ಪ್ರಾದ್ಯಾಪಕರು (ಇತಿಹಾಸ)
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪುತ್ತೂರು
1 comment
Thank you Stephen for the well researched and refreshing article on the most pertinent occasion. To analyse information, we need information/ data first. You have made a survey of the inception and evolution of Konknni with a historical perspective and with an ideal dose of the most significant contributors to Konknni – seminal books, authors and language experts who have brought konknni to the current status.
I would like to promote among students the reading of William Madtha’s rare research work from our library.
Thanks for reminding our heritage and our responsibility.