ಬೆಂಗಳೂರಿನ ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ವಾಣಿಜ್ಯೋದ್ಯಮ ಕೋಶವು ಸಾರ್ವಜನಿಕ ಸಂಪರ್ಕ ಕಚೇರಿಯ ಸಹಯೋಗದೊಂದಿಗೆ, “ಸ್ಟಾರ್ಟ್-ಅಪ್ ಮೇಳ 4.0” ಮತ್ತು “ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಇನ್ನೋವೇಷನ್ ಕೌನ್ಸಿಲ್” ಉದ್ಘಾಟನಾ ಸಮಾರಂಭವನ್ನು ಆಯೋಜಿಸಿತು.
ಈ ಕಾರ್ಯಕ್ರಮವನ್ನು 28 ಅಕ್ಟೋಬರ್ 2024 ರಂದು ಬೆಂಗಳೂರಿನ ವಿಶ್ವವಿದ್ಯಾಲಯದ ಮೈದಾನದಲ್ಲಿ ಗಣ್ಯ ಅತಿಥಿಗಳಾದ ಡಾ. ರಾಜ್ ವಾಘ್ರೇ, ಮುಖ್ಯಸ್ಥರು, ಎಂಟರ್ಪ್ರೆನ್ಯೂರ್‌ಶಿಪ್ (STEM) ಸೆಲ್, ಫೌಂಡೇಶನ್ ಫಾರ್ ಸೈನ್ಸ್, ಇನ್ನೋವೇಷನ್ ಅಂಡ್ ಡೆವಲಪ್‌ಮೆಂಟ್ (FSID), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ಮತ್ತು ಡಾ. ಪಿ.ವಿ. ವೆಂಕಟಕೃಷ್ಣನ್, ವಿಜ್ಞಾನಿ ಮತ್ತು ಮಾಜಿ ನಿರ್ದೇಶಕರು, ಇಸ್ರೋ ಇವರು ಉದ್ಘಾಟಿಸಿದರು.
ಈ ವರ್ಷದ ಸ್ಟಾರ್ಟ್-ಅಪ್ ಮೇಳ 4.0 ವಿವಿಧ ಕ್ಷೇತ್ರಗಳ ಸುಮಾರು 100 ಸ್ಟಾರ್ಟ್-ಅಪ್‌ಗಳನ್ನು ಪ್ರದರ್ಶಿಸಿತು ಮತ್ತು 10 ಕ್ಕೂ ಹೆಚ್ಚು ಸಾಹಸೋದ್ಯಮ ಬಂಡವಾಳಗಾರರನ್ನು ಒಳಗೊಂಡಿತ್ತು, ಇದು ನವೀನತೆ, ನೆಟ್‌ವರ್ಕಿಂಗ್ ಮತ್ತು ಬೆಳವಣಿಗೆಗೆ ಅನನ್ಯ ವೇದಿಕೆಯನ್ನು ಒದಗಿಸಿತು. ಈ ಕಾರ್ಯಕ್ರಮವು ಉದ್ಯಮಶೀಲತಾ ಮನೋಭಾವವನ್ನು ಬೆಳೆಸಿ, ಉದಯೋನ್ಮುಖ ಉದ್ಯಮಿಗಳನ್ನು ಸಂಭಾವ್ಯ ಹೂಡಿಕೆದಾರರೊಂದಿಗೆ ಸಂಪರ್ಕ ಏರ್ಪಡಿಸಿ ಮತ್ತು ವಿದ್ಯಾರ್ಥಿಗಳಿಗೆ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯಲ್ಲಿ ವೃತ್ತಿಪರ ಅವಕಾಶಗಳನ್ನು ಅನ್ವೇಷಿಸಲು ಪ್ರೇರೇಪಿಸಿತು.
ಈ ಸಂದರ್ಭದಲ್ಲಿ ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಇನ್ನೋವೇಷನ್ ಕೌನ್ಸಿಲ್’ನ ಉದ್ಘಾಟನೆಯು ಜರುಗಿತು. ಈ ಕೌನ್ಸಿಲ್ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ನವೀನತೆ, ಸ್ಟಾರ್ಟ್-ಅಪ್ ಸಂಸ್ಕೃತಿ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸ್ಟಾರ್ಟ್-ಅಪ್ ಉತ್ಸಾಹಿಗಳು ಭಾಗವಹಿಸಿ ಭಾರತದ ಭವಿಷ್ಯವನ್ನು ರೂಪಿಸುವವರೊಂದಿಗೆ ಸಂವಾದ ನಡೆಸಿದರು. ಈ ಕಾರ್ಯಕ್ರಮವನ್ನು ಎಸ್‌ಜೆಯುನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿ ದೇವಾಂಶ್ ಮೆಹ್ತಾ ಮತ್ತು ಅವರ ತಂಡದ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.