“ಸುಭಾಷ್ ಚಂದ್ರ ಭೋಸರ ಅಜಾದ್ ಹಿಂದ್ ಫೌಜ್ ನಲ್ಲಿ ನೂರಾರು ಸಂಖ್ಯೆಯ ಮುಸ್ಲಿಮರಿದ್ದರು. ನೇತಾಜಿ ತೀರಿಕೊಂಡಾಗ ಅವರ ಜೊತೆ ಇದ್ದ ಏಕೈಕ ವ್ಯಕ್ತಿ ಹಬೀಬುರ್ ರೆಹ್ಮಾನ್ ಎಂಬವರು. ಇತಿಹಾಸಕಾರರು ದಾಖಲಿಸಿದಂತೆ ಸುಮಾರು 27,000ಕ್ಕೂ ಹೆಚ್ಚು ಮುಸಲ್ಮಾನರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದರು. ಈ ಹೋರಾಟದಲ್ಲಿ ಹಬೀಬಾ, ಅಸ್ಘರಿ ಬೇಗಂ, ಹಜರತ್ ಮಹಲ್ ಬೇಗಂ, ಅಜೀಜನ್ ಬಾಯಿ ಮೊದಲಾದ ಮುಸ್ಲಿಂ ಮಹಿಳೆಯರಿದ್ದರು. ಆದರೆ ಇಂದು ಮುಸ್ಲಿಮರು ನಾನು ಭಾರತೀಯ ಎಂದು ದಿನಂಪ್ರತಿ ಘೋಷಣೆ ಮಾಡಬೇಕಾದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿರುವುದು ಖೇದಕರ” ಎಂದು ಜೆಎನ್‌ಯು ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಡಾ| ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ| ಬಿಳಿಮಲೆ, ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದ, ಉಡುಗೊರೆ ಪ್ರಕಾಶನ ಪ್ರಕಟಿಸಿದ ಫಾತಿಮಾ ರಲಿಯಾ ಅವರ ‘ಅವಳ ಕಾಲು ಸೋಲದಿರಲಿ’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತಾಡುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಫಾತಿಮಾ ರಲಿಯಾ ಅವರ ಪತಿ ಅಬ್ದುಲ್ ಅಜೀಜ್ ಮತ್ತು ಮಗಳು ಹಿಬಾ ಉಪಸ್ಥಿತರಿದ್ದರು.
“ಹಿಂದೂ ವಿದ್ಯಾವಂತರು ಪಾಶ್ಚಾತ್ಯ ವಿದ್ಯೆಗೂ ತೆರೆದುಕೊಂಡು ಆಧುನಿಕರಾಗುತ್ತಿದ್ದಾಗ, ಮುಸ್ಲಿಮರು ಇಂಗ್ಲಿಷರ ಜತೆಗೆ ಇಂಗ್ಲಿಷನ್ನೂ ವಿರೋಧಿಸಿದ್ದರು ಮತ್ತು ಉರ್ದುವನ್ನು ಅಪ್ಪಿಕೊಂಡಿದ್ದರು. ಸ್ವಾತಂತ್ರ್ಯ ನಂತರ ಉರ್ದುವನ್ನು ಹಿಂದಿಕ್ಕಿ ಹಿಂದಿ ಭಾಷೆ ಮುನ್ನೆಲೆಗೆ ಬಂದುದರಿಂದ ಭಾರತೀಯ ಮುಸ್ಲಿಮರು ಆ ಕಡೆ ಆಡಳಿತಕ್ಕೂ ಸೇರಿಕೊಳ್ಳದೆ ಈ ಕಡೆ ಉರ್ದುವನ್ನೂ ಉಳಿಸಿಕೊಳ್ಳಲಾಗದೆ ಇಕ್ಕಟ್ಟಿಗೆ ಸಿಲುಕಿದರು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕನ್ನಡ, ಹಿಂದಿ, ತಮಿಳು, ಮಲೆಯಾಳಂ ಮತ್ತಿತರ ದೇಶೀ ಭಾಷೆಗಳಲ್ಲಿ ಬರೆಯುತ್ತಿರುವ ಮುಸ್ಲಿಂ ಲೇಖಕರನ್ನು ನಾವು ಬೆಂಬಲಿಸ ಬೇಕಾಗಿದೆ” ಡಾ| ಬಿಳಿಮಲೆ ಹೇಳಿದರು.
ನವಿಲಿನ ರೂಪಕವನ್ನು ಕೇಂದ್ರವಾಗಿರಿಸಿ, ಪುಸ್ತಕದ ಬಗ್ಗೆ ಮತ್ತು ಒಟ್ಟು ಕಾವ್ಯದ ಬಗ್ಗೆ ಲೇಖಕಿ/ ಪ್ರಾಧ್ಯಾಪಕಿ ಸುಧಾ ಆಡುಕಳ ಮಾರ್ಮಿಕವಾಗಿ ಮಾತಾಡಿದರು. ಪತ್ರಕರ್ತ/ ಕವಿ ಮುಆದ್ ಜಿ.ಎಂ. ಫಾತಿಮಾ ರಲಿಯಾ ಅವರ ಎರಡು ಕವನಗಳನ್ನು ಮನಮುಟ್ಟುವ ರೀತಿ ವಾಚಿಸಿದರು. ಮುಖ್ಯ ಅತಿಥಿ ಕವಿ ವಿಲ್ಸನ್ ಕಟೀಲ್ ಪ್ರಭುತ್ವದ ಕಪಿಮುಷ್ಠಿಯಲ್ಲಿ ನಲುಗುತ್ತಿರುವ ನಾಡಿನ ಲೇಖಕರು ವಹಿಸಿಕೊಳ್ಳಲೇಬೇಕಾದ ಜವಾಬ್ದಾರಿಯ ಬಗ್ಗೆ ಪ್ರಸ್ತಾಪಿಸಿದರು.
ಲೇಖಕಿ ಉಮೈರತ್ ಕುಮೇರು ಅತಿಥಿಗಳನ್ನು ಪರಿಚಯಿಸಿ ಸ್ವಾಗತ ಕೋರಿದರು. ಕವಯಿತ್ರಿ ಫಾತಿಮಾ ರಲಿಯಾ ತನ್ನ ಬಾಲ್ಯ, ಓದು ಮತ್ತು ಕವಿತೆಯನ್ನು ಬರೆಯಲು ಆರಂಭಿಸಿದ ಬೊನ್ಸಾಯ್ ಕ್ಷಣ ಹಾಗೂ ಉಡುಗೊರೆ ಪ್ರಕಾಶನದ ಪರಿಕಲ್ಪನೆ ಮತ್ತು ಮುಂದಿನ ಹೆಜ್ಜೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡಿದರು.
ಪತ್ರಕರ್ತ ಎಚ್. ಎಂ. ಪೆರ್ನಾಳ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು. ಭಾಗವಹಿಸಿದ ಅತಿಥಿಗಳಿಗೆ ಮತ್ತು ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಉಡುಗೊರೆ ಪ್ರಕಾಶನದ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಅವಳ ಕಾಲು ಸೋಲದಿರಲಿ – ಫಾತಿಮಾ ರಲಿಯಾ ಅವರ ಪ್ರಕಟವಾಗುತ್ತಿರುವ ಮೂರನೇ ಪುಸ್ತಕವಾಗಿದ್ದು ತಮ್ಮದೇ ಸ್ವಂತ ಪ್ರಕಾಶನ ‘ಉಡುಗೊರೆ ಪ್ರಕಾಶನ’ ದ ಮೂಲಕ ಇದನ್ನು ಪ್ರಕಟಿಸಲಾಗಿದೆ. ಈ ಹಿಂದೆ ಅವರ ‘ಕಡಲು ನೋಡಲು ಹೋದವಳು’ ಲಲಿತ ಪ್ರಬಂಧಗಳ ಸಂಗ್ರಹ ( 2022 – ಅಹರ್ನಿಶಿ ಪ್ರಕಾಶನ ) ಮತ್ತು ‘ಒಡೆಯಲಾರದ ಒಡಪು’ ಕಥಾ ಸಂಕಲನ ( 2023 – ಸಂಕಥನ ) ಪ್ರಕಟವಾಗಿವೆ.
‘ಅವಳ ಕಾಲು ಸೋಲದಿರಲಿ” ಪುಸ್ತಕದ ಪ್ರತಿಗಳು ಈ ಕೆಳಗಿನ ಜಾಲತಾಣಗಳಲ್ಲಿ ಮಾರಾಟಕ್ಕೆ ಲಭ್ಯವಿದೆ :
■ ಚಿತ್ರ / ವರದಿ : ಅಲ್ಪೋನ್ಸ್ ಮೆಂಡೋನ್ಸಾ, ಶಂಕರಪುರ